ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ನಿಯೋಗದ ಗುರುವಾರ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ಗೆ ದೂರು ಸಲ್ಲಿಸಲಾಯಿತು. ಡಾ.ಬಿ.ಜೆ.ವಿಜಯಕುಮಾರ್, ಅಯೂಬ್ ಖಾನ್, ಬಿ.ಎಂ.ರಾಮು, ಪುಷ್ಪಲತಾ ಚಿಕ್ಕಣ್ಣ, ಎಂ.ಶಿವಣ್ಣ ಗುಡ್ಡಪ್ಪ ಇದ್ದರು.
ಮೈಸೂರು: ಬಿಜೆಪಿಯ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯರನ್ನು ವರ್ಗಾವಣೆ ದಂಧೆ ಹಾಗೂ ಕಮಿಷನ್ ವಸೂಲಿ ಇಲಾಖೆ ಕರ್ನಾಟಕ ಸರ್ಕಾರದ ಸಚಿವರು ಎಂದು ಪೋಸ್ಟ್ ಮಾಡಿರುವುದು ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ‘ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ವರ್ಗಾವಣೆ ದಂಧೆ ಸಚಿವ ಎಂದು ನಿಂದಿಸಿದ್ದರ ವಿರುದ್ಧ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ಕಾಂಗ್ರೆಸ್ ನಿಯೋಗ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಸಮಿತಿ ನಿಯೋಗ ಗುರುವಾರ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಭೇಟಿಯಾಗಿ ದೂರು ಸಲ್ಲಿಸಿತು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಬಿಜೆಪಿ ಐಟಿಸೆಲ್ ಯತೀಂದ್ರ ಅವರ ವಿಚಾರದಲ್ಲಿ ಬಹಳ ಕೆಟ್ಟದಾಗಿ ದಂಧೆ ಖಾತೆಯ ಸಚಿವರು ಎಂದು ಬಿಂಬಿಸಿ ಪ್ರಚಾರ ಮಾಡಿರುವುದರ ವಿರುದ್ಧ ಅವರನ್ನು ಸೈಬರ್ ಆಕ್ಟ್ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.
ನಿತ್ಯ ಮುಖ್ಯಮಂತ್ರಿ, ಅವರ ಕುಟುಂಬದವರನ್ನು ಬೈಯುವುದಕ್ಕೆ ವ್ಯವಸ್ಥೆ ಮಾಡಿಕೊಂಡಿರುವುದರ ವಿರುದ್ಧವೂ ದೂರು ನೀಡಿದ್ದೇವೆ. ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಎರಡನೇ ಅವಧಿಗೆ ಸಿಎಂ ಆಗಿರುವುದನ್ನು ಸಹಿಸಲು ಆಗುತ್ತಿಲ್ಲ. ಅವರನ್ನು ಸಿಎಂ ಹುದ್ದೆಯಿಂದ ತೆಗೆಯಬೇಕೆಂಬ ಉದ್ದೇಶದಿಂದ ನಿತ್ಯವೂ ಸುಳ್ಳು ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಬಿ.ವೈ.ವಿಜಯೇಂದ್ರ ತಂದೆ ಮುಖ್ಯಮಂತ್ರಿಯಾಗಿದ್ದಾಗ ತಾವೇ ಸಹಿ ಮಾಡಿ ಸಿಕ್ಕಿಹಾಕಿಕೊಂಡಿದ್ದರು. ಈಗ ಸಿಎಂ ವಿರುದ್ಧ ಮಾತನಾಡುತ್ತಿದ್ದಾರೆ. ಕೆಲ ಬಿಜೆಪಿ ಶಾಸಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜಿಲ್ಲಾಧ್ಯಕ್ಷರು ನೀಡಿದ ಗಡುವಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ ಸಿಎಂ ಹಾಗೂ ಅಧ್ಯಕ್ಷರ ಮಾತಿಗೂ ಸುಮ್ಮನಾಗದೆ ಕಾರ್ಯಕರ್ತರೇ ನಮ್ಮ ನಾಯಕರ ರಕ್ಷಣೆ ಮುಂದಾಗಲಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಮುಖ್ಯಮಂತ್ರಿ ವಿರುದ್ಧ ಇಂತಹ ಹೇಳಿಕೆಗಳನ್ನು ಸಹಿಸಲಾಗುವುದಿಲ್ಲ. ಅಲ್ಲದೆ, ಯತೀಂದ್ರ ಅವರ ಮೇಲೆ ಆಧಾರ ಇಲ್ಲದೇ ಆರೋಪ ಮಾಡುತ್ತಿರುವುದು ಖಂಡನೀಯ. ಬಿಜೆಪಿ ಐಟಿಸೆಲ್ ಮತ್ತು ಪ್ರತಾಪ್ ಸಿಂಹ ವಿರುದ್ಧ ಎಫ್‌ಆರ್‌ಐ ಆಗಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ ಗುಡ್ಡಪ್ಪ, ಕಾರ್ಯದರ್ಶಿ ಈಶ್ವರ್ ಚಕ್ಕಡಿ, ಭಾಸ್ಕರ್ ಎಲ್.ಗೌಡ, ಮೋಹನ್, ಹಿಂದುಳಿದ ವರ್ಗಗಳ ನಗರಾಧ್ಯಕ್ಷ ನಾಗೇಶ್, ಕುರುಬರಹಳ್ಳಿ ಪ್ರಕಾಶ್, ಉಮಾಶಂಕರ್, ಮುಖಂಡರಾದ ಕುರುಬರಹಳ್ಳಿ ರಾಹುಲ್, ಹುಣಸೂರು ಬಸವಣ್ಣ, ಕಾಂಗ್ರೆಸ್ ಮಾಧ್ಯಮ ವಕ್ತಾರ ಮಹೇಶ್, ಚಂದನ್ ಗೌಡ, ಮೋಹನ್ ಇದ್ದರು.