- ವಿವಿಧೆಡೆ ಹಕ್ಕಿ ಜ್ವರದ ಸೋಂಕು ಪತ್ತೆ ಹಿನ್ನೆಲೆ
- ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ನಿಗಾ ಇಡಲು ಕ್ಷಿಪ್ರ ಕಾರ್ಯಪಡೆ ತಂಡ
- ಮೃಗಾಲಯಕ್ಕೆ ಬರುವ ಎಲ್ಲ ವಾಹನಗಳನ್ನು ಪ್ರವೇಶದ್ವಾರದಲ್ಲಿಯೇ ಸೋಂಕು ನಿವಾರಣ ದ್ರವ ಸಿಂಪಡಣೆ
ಮೈಸೂರು: ವಿವಿಧೆಡೆ ಹಕ್ಕಿ ಜ್ವರದ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ನಿಗಾ ಇಡಲು ಕ್ಷಿಪ್ರ ಕಾರ್ಯಪಡೆ ತಂಡವೊಂದನ್ನು ರಚಿಸಲಾಗಿದೆ. ಮೈಸೂರು ಮೃಗಾಲಯ, ಕಾರಂಜಿಕೆರೆ ಹಾಗೂ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ಪುನರ್ವಸತಿ ಕೇಂದ್ರದಲ್ಲಿ ಪ್ರಾಣಿ-ಪಕ್ಷಿಗಳ ಆರೋಗ್ಯ ಕಾಪಾಡಲು ಹಾಗೂ ಹಕ್ಕಿಜ್ವರದ ಸೋಂಕು ಹರಡುವಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಮೃಗಾಲಯಕ್ಕೆ ಬರುವ ಎಲ್ಲ ವಾಹನಗಳನ್ನು ಪ್ರವೇಶದ್ವಾರದಲ್ಲಿಯೇ ಸೋಂಕು ನಿವಾರಣ ದ್ರವ ಸಿಂಪಡಿಸಲಾಗುತ್ತದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.
ಎಲ್ಲ ಸಿಬ್ಬಂದಿ, ಪ್ರವಾಸಿಗರು ಸೋಂಕು ನಿವಾರಕ ದ್ರವ್ಯವಿರುವ ಮ್ಯಾಟ್ ಮೇಲೆ ಕಾಲಿಟ್ಟು(ಶೂ, ಚಪ್ಪಲಿ) ಒಳಗೆ ಬರುವಂತೆ ಸೂಚಿಸಲಾಗಿದೆ. ಪ್ರಾಣಿ ಮತ್ತು ಪಕ್ಷಿಗಳ ಮನೆ ಆವರಣದಲ್ಲಿ ಫುಟ್ ಡಿಪ್ ಅಳವಡಿಸಲಾಗಿದೆ. ಪ್ರಾಣಿ-ಪಕ್ಷಿಗಳ ಪಾಲಕರು ಹಾಗೂ ಸ್ವಚ್ಛತಾ ಸಿಬ್ಬಂದಿ ಕೆಲಸಕ್ಕೂ ಮುನ್ನ ಹಾಗೂ ಕೆಲಸದ ನಂತರ ಸ್ಯಾನಿಟೈಸರ್ ಬಳಸುವಂತೆ ನಿರ್ದೇಶನ ನೀಡಲಾಗಿದೆ.
ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳ ಆರೋಗ್ಯದ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಯಾವುದಾದರೂ ಪ್ರಾಣಿ-ಪಕ್ಷಿಗಳ ವರ್ತನೆಯಲ್ಲಿ ಅಸಹಜತೆ ಕಂಡು ಬಂದರೆ ಕೂಡಲೇ ವೈದ್ಯರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ವಲಸೆ ಪಕ್ಷಿಗಳ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ.