ಓಡಿಪಿ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎನ್.ಎಚ್. ಜಗನ್ನಾಥ್, ರಮೇಶ್, ಫ್ರಾನ್ಸಿಸ್ ಎಸ್.ಜೆ. ಸರಾವೋ, ಡಾ. ಎಸ್. ಉಮೇಶ್, ಎನ್. ಪ್ರಸನ್ನ, ಎಂ. ಸ್ವಾಮಿ ಅಂತಪ್ಪ, ಎಂ.ಬಿ. ಅನೀಸ್ ಇತರರಿದ್ದರು.
- ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅಭಿಪ್ರಾಯ
ನದಿಗಳು, ಗಿಡ-ಮರಗಳ ಉಳಿಯಬೇಕಾದರೆ ಮಣ್ಣಿನ ಫಲವತತ್ತೆ ಮುಖ್ಯ. ನದಿಯಲ್ಲಿನ ಜಲಚರಗಳಿಗೆ ಉಸಿರಾಡಲು ನೀರಿನ ಗುಣ ಅತಿ ಮುಖ್ಯ ಎಂದು ಕೊಳ್ಳೇಗಾಲ ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಹೇಳಿದರು.
ನಗರದ ಬನ್ನಿಮಂಟಪ ರಸ್ತೆಯಲ್ಲಿರುವ ಓಡಿಪಿ (ದಿ ಆರ್ಗನೈಜೇಷನ್ ಫಾರ್ ದಿ ಡೆವಲಪ್ಮೆಂಟ್ ಆಫ್ ಪೀಪಲ್) ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗೋಪಿನಾಥಂ ಭಾಗದಲ್ಲಿ ಇತ್ತೀಚೆಗೆ ಕಾವೇರಿ ನದಿಯ ನೀರು ಕೆಂಪು ಬಣ್ಣಕ್ಕೆ ತಿರುಗಿರುವುದು ಮಣ್ಣಿನ ಸವೆತದ ಗಂಭೀರತೆಯನ್ನು ತೋರಿಸುತ್ತದೆ. ಮಣ್ಣಿನ ಫಲವತ್ತತೆ ಉಳಿದರೆ ಮಾತ್ರ ಅರಣ್ಯ, ನದಿಗಳು ಹಾಗೂ ಜೀವ ವೈವಿಧ್ಯತೆ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪರಿಸರವಾದಿ ರಮೇಶ್ ಮಾತನಾಡಿ, ಪರಿಸರ ಸಂರಕ್ಷಣೆ ಎಂದರೆ ಕೇವಲ ಗಿಡ ನೆಡುವುದಲ್ಲ; ಗಾಳಿ, ನೀರು, ಮಣ್ಣು ಹಾಗೂ ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳುವುದೂ ಮುಖ್ಯ. ಸಾವಿಲ್ಲದ ಮನೆ ಹುಡುಕಿ ಎಂದು ಬುದ್ದ ಹೇಳಿದ ರೀತಿ ಇಂದು ಪ್ಲಾಸ್ಟಿಕ್ ಇಲ್ಲದ ಮನೆಯನ್ನು ಹುಡಬೇಕಿದೆ ಎಂದು ಹೇಳಿದರು.
ಏಕಬಳಕೆಯ ಪ್ಲಾಸ್ಟಿಕ್‌ಪರಿಸರಕ್ಕೆ ದೊಡ್ಡ ಸವಾಲಾಗಿದ್ದು, ಪ್ರತಿನಿತ್ಯ ಸಾವಿರಾರು ಟನ್ ತ್ಯಾಜ್ಯ ಭೂಮಿಗೆ ಸೇರುತ್ತಿದೆ. ಅಂತರ್ಜಲ ಕುಸಿತ ಹಾಗೂ ಮಾಲಿನ್ಯ ಸಮಸ್ಯೆಗಳಿಗೆ ಪ್ಲಾಸ್ಟಿಕ್ ಪ್ರಮುಖ ಕಾರಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಪಂಚದ 28 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 16 ನಗರಗಳಿರುವುದು ಪರಿಸರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಮುಂದಿನ ಪೀಳಿಗೆಗಾಗಿ ಪರಿಸರ ಸಂರಕ್ಷಣೆಯನ್ನು ಜನಾಂದೋಲನವಾಗಿ ರೂಪಿಸಬೇಕಿದೆ ಎಂದರು.
ಓಡಿಪಿ ಸಂಸ್ಥೆಯ ಅಧ್ಯಕ್ಷ ಫ್ರಾನ್ಸಿಸ್ ಎಸ್.ಜೆ. ಸರಾವೋ, ಮೈಸೂರು ವಿಶ್ವವಿದ್ಯಾಲಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಎಸ್.ಉಮೇಶ್, ಪಾಂಡವಪುರ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎನ್.ಪ್ರಸನ್ನ, ಮೈಸೂರು ಧರ್ಮಪ್ರಾಂತ್ಯದ ಗುರು ಎಂ. ಸ್ವಾಮಿ ಅಂತಪ್ಪ, ಗ್ರಾಮ ವಿಕಾಸ ಸ್ವಸಹಾಯ ಸಂಘಗಳ ಮಹಾ ಒಕ್ಕೂಟದ ಅಧ್ಯಕ್ಷ ಎಂ.ಬಿ. ಅನೀಸ್ ಇತರರಿದ್ದರು.