ಸರಗೂರು ತಾಲೂಕಿನ ಗೊತಾಗಾಲಹುಂಡಿ ಗ್ರಾಮದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೇವರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
- ಗೊಂತಗಾಲಹುಂಡಿ ಗ್ರಾಮ
- ದೇವರ ವಿಗ್ರಹಕ್ಕೆ ವಿವಿಧ ಅಭಿಷೇಕ
ಸರಗೂರು: ತಾಲೂಕಿನ ಗೊಂತಗಾಲಹುಂಡಿ ಗ್ರಾಮದಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಉದ್ಘಾಟನೆ, ಕಳಸ ಪ್ರತಿಷ್ಠಾಪನೆ, ಜಾತ್ರಾ ಮಹೋತ್ಸವ ವಿಜೃಂಭಣೆಯ ನೆರವೇರಿತು.
ಕಳಸ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಸ್ವಚ್ಛಗೊಳಿಸಿ ವಿವಿಧ ಬಗೆಯ ಬಣ್ಣ ಬಳಿಯಲಾಗಿತ್ತು. ದೇವರ ವಿಗ್ರಹಕ್ಕೆ ವಿವಿಧ ಅಭಿಷೇಕ ನಡೆಸಲಾಯಿತು. ದೇವರನ್ನು ಗಂಗಾ ನದಿಗೆ ಕರೆದುಕೊಂಡು ಹೋಗಿ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಕಳಸ, ದೇವರ ವಿಗ್ರಹಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಉತ್ಸವಮೂರ್ತಿ ದೇವಸ್ಥಾನದೊಳಗೆ ಬಂದ ಕೂಡಲೇ ಆರತಿ ಬೆಳಗಿ ಗ್ರಾಮಸ್ಥರು ಸ್ವಾಗತಿಸಿದರು. ನಂತರ ದೇವರನ್ನು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಇದಕ್ಕೂ ಮುನ್ನ ದೇವರ ಬಿರುದು ಹೊತ್ತು ಭಕ್ತರು ಬಿಳಿಗಿರಿ ರಂಗನಾಥಸ್ವಾಮಿಯನ್ನು ಭಕ್ತಿಭಾವದಿಂದ ನೆನೆದರು
ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ಹರಕೆ ಪೂಜೆ ಸಲ್ಲಿಸಿದರು. ಅನ್ನ ಸಂತರ್ಪಣೆ ಮಾಡಲಾಯಿತು.
ಶಾಸಕ ಅನಿಲ್ ಚಿಕ್ಕಮಾದು ಭೇಟಿ: ಶಾಸಕ ಅನಿಲ್ ಚಿಕ್ಕಮಾದು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮುಖಂಡರಾದ ಚಿಕ್ಕಣ್ಣ, ಚಿನ್ನಯ್ಯ, ಚಿಕ್ಕಕಲಾಶಟ್ಟರು, ಮಹದೇವ, ಚನ್ನನಾಯಕ, ಕುಮಾರ್ ಇತರರಿದ್ದರು.