ಹನಗೋಡು ಹೋಬಳಿಯ ಕಡೆಮನಗನಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ರಾಗಿ ಒಕ್ಕಣೆ ಯಂತ್ರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಯಂತ್ರದ ಒಳಗೆ ನುಗ್ಗಿರುವುದು.
ಹನಗೋಡು: ರಾಗಿ ಒಕ್ಕಣೆ ಯಂತ್ರ ಹಾಗೂ ಬೈಕ್ ಮುಖಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಡೆಮನುಗನಹಳ್ಳಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ಹನಗೋಡು ಹೋಬಳಿಯ ಉಡುವೆಪುರ- ಅಯ್ಯನಕೆರೆ ಗಿರಿಜನ ಹಾಡಿಯ ನಿವಾಸಿ ಶಿವಾಜಿಯವರ ಪುತ್ರ ಗಿರೀಶ (26) ಮೃತಪಟ್ಟ ದುರ್ದೈವಿ. ಇವರಿಗೆ ಪತ್ನಿ ಹಾಗೂ ನಾಲ್ಕು ವರ್ಷದ ಮಗು ಇದೆ.
ಗಿರೀಶ ಶನಿವಾರ ರಾತ್ರಿ 8ರ ಸಮಯದಲ್ಲಿ ಬೈಕ್‌ನಲ್ಲಿ ಅಯ್ಯನಕೆರೆಯಿಂದ ಪಂಚವಳ್ಳಿಗೆ ತೆರಳುತ್ತಿದ್ದು, ಕಡೆಮನುಗನಹಳ್ಳಿ ಗ್ರಾಮದಲ್ಲಿ ಎದುರಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಗಿರೀಶನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳಕ್ಕೆ ಎಸ್‌ಐ ರಾಧಾ ಭೇಟಿ ನೀಡಿ ಮಹಜರು ನಡೆಸಿ ರಾಗಿ ಒಕ್ಕಣೆ ಯಂತ್ರ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ. ಗಿರೀಶನ ಮೃತದೇಹವನ್ನು ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಭಾನುವಾರ ಸಂಜೆ ಅಯ್ಯನಕೆರೆಯಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.