ಸೈಕಲ್ ದಿನದ ಅಂಗವಾಗಿ ಭಾನುವಾರ ಮೈಸೂರಿನಲ್ಲಿ ನೂರಾರು ಜನರು ಸೈಕ್ಲಿಂಗ್‌ನಲ್ಲಿ ಭಾಗಿಯಾದರು. 
ಮೈಸೂರು

ಮೈಸೂರಿನಲ್ಲಿ ಸೈಕಲ್ ದಿನ ಆಚರಣೆ

ಮೈಸೂರು: ಸಾಂಸ್ಕೃತಿಕ ನಗರಿಯ ಪರಿಸರ ಸಂರಕ್ಷಣೆ ಮತ್ತು ನಾಗರಿಕರ ಆರೋಗ್ಯ ವೃದ್ಧಿಯ ಆಶಯದೊಂದಿಗೆ ಭಾನುವಾರ ಆಯೋಜಿಸಲಾಗಿದ್ದ ಮೈಸೂರು ಸೈಕಲ್ ದಿನ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.
ನಗರ ಪಾಲಿಕೆ, ಜಿಐಝಡ್ ಇಂಡಿಯಾ ಸಹಯೋಗದೊಂದಿಗೆ ಇಎಸ್‌ಎಎಫ್ ಫೌಂಡೇಷನ್ ಸೈಕಲ್ ದಿನ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೇವರಾಜ ಅರಸು ರಸ್ತೆಯಲ್ಲಿ ನಡೆದ ಈ ಅಭಿಯಾನದಲ್ಲಿ ನಗರದ ವಿವಿಧೆಡೆಯಿಂದ 350ಕ್ಕೂ ಹೆಚ್ಚು ಸೈಕಲ್ ಪ್ರೇಮಿಗಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದರು.
ಸಾರ್ವಜನಿಕರಿಗಾಗಿ ಝುಂಬಾ ನೃತ್ಯ, ವಿದ್ಯಾರ್ಥಿಗಳಿಗಾಗಿ ರಸ್ತೆ ರಂಗೋಲಿ ಮತ್ತು ಜಲವರ್ಣ ಚಿತ್ರಕಲೆ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳು ನಡೆದವು. ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಸೇರಿದಂತೆ ಅನೇಕರು ಇದರಲ್ಲಿ ಭಾಗವಹಿಸಿ ಉತ್ಸಾಹವನ್ನು ಹೆಚ್ಚಿಸಿದರು. ಇನ್ನು ಮುಂದೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಭಾನುವಾರ ಈ ಸೈಕಲ್ ದಿನ ಮುಂದುವರೆಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಅತ್ಯುತ್ತಮ ಸೇವೆ ಸಲ್ಲಿಸಿದ ಪೌರಕಾರ್ಮಿಕರು ಹಾಗೂ ನೈರ್ಮಲ್ಯ ಮೇಲ್ವಿಚಾರಕರನ್ನು ಗೌರವಿಸಲಾಯಿತು. ಸ್ವಚ್ಛ ಸರ್ವೇಕ್ಷಣೆ-2025ರ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸ್ವಚ್ಛತಾ ಚಾಂಪಿಯನ್‌ಗಳನ್ನು ಸನ್ಮಾನಿಸಲಾಯಿತು. ಮನೆಯಲ್ಲೇ ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ತಾರಸಿ ತೋಟ ಮಾಡಿದ ರಮಾ ಅಮರನಾಥ್, ಮುಬಾರಕ್ ಹಾಗೂ ವಿಕಾಸ್ ಅವರಿಗೆ ಪ್ರಶಸ್ತಿ ನೀಡಲಾಯಿತು. 6,800ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟ ಟೀಂ ಮೈಸೂರು, ಸ್ವಚ್ಛತಾ ಶ್ರಮದಾನ ಮಾಡಿದ ಪೃಥ್ವಿ ನೇತೃತ್ವದ ಎನ್‌ಎಸ್‌ಎಸ್ ತಂಡ ಹಾಗೂ ಅನಿಲ್ ಕುಮಾರ್ ರಾಮಯ್ಯ ನೇತೃತ್ವದ ಯುವರಾಜ ಕಾಲೇಜಿನ ಎನ್‌ಸಿಸಿ ತಂಡಗಳನ್ನು ಗೌರವಿಸಲಾಯಿತು. 30,000ಕ್ಕೂ ಹೆಚ್ಚು ಪ್ಲಾಸ್ಟಿಕ್ ಟೂತ್ ಬ್ರಷ್‌ಗಳನ್ನು ಸಂಗ್ರಹಿಸಿ ಸಂಸ್ಕರಿಸಿದ ಡಾ. ಭರತ್ ಕುಮಾರ್ ಹಾಗೂ ಹೆಚ್ಚುವರಿ ಆಹಾರವನ್ನು ಹಸಿದವರಿಗೆ ತಲುಪಿಸುತ್ತಿರುವ ಸಂತೃಪ್ತಿ ಎನ್‌ಜಿಒ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಲಾಯಿತು.
ಸಂಸ್ಥೆಗಳ ವಿಭಾಗದಲ್ಲಿ ‘ಸ್ವಚ್ಛ ಸರ್ಕಾರಿ ಕಚೇರಿ’ ಪ್ರಶಸ್ತಿಯನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಚಾಮರಾಜೇಂದ್ರ ಮೃಗಾಲಯ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪಡೆದುಕೊಂಡವು. ಸ್ವಚ್ಛ ಆಸ್ಪತ್ರೆ ವಿಭಾಗದಲ್ಲಿ ನಾರಾಯಣ ಹೃದಯಾಲಯ, ಅಪೊಲೊ ಬಿಜಿಎಸ್ ಹಾಗೂ ಜಯದೇವ ಆಸ್ಪತ್ರೆಗಳು ಗುರುತಿಸಲ್ಪಟ್ಟವು. ಹೋಟೆಲ್ ವಿಭಾಗದಲ್ಲಿ ದಕ್ಷಿಣ ಪಾಕ ಮತ್ತು ಸದನ್ ಸ್ಟಾರ್ ಹೋಟೆಲ್‌ಗಳು, ಶಾಲಾ ವಿಭಾಗದಲ್ಲಿ ಪಿ.ಎಂ.ಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವನಿತಾ ಸದನ, ಸಿ.ಕೆ.ಸಿ ಕಾನ್ವೆಂಟ್‌ಮತ್ತು ನಿರ್ಮಲಾ ಕಾನ್ವೆಂಟ್‌ಗಳು ಸ್ವಚ್ಛ ಪ್ರಶಸ್ತಿ ಮುಡಿಗೇರಿಸಿಕೊಂಡವು. ರೈಲ್ವೆ ನಿಲ್ದಾಣ ಮತ್ತು ಸುಬರ್ಬನ್ ಬಸ್ ನಿಲ್ದಾಣಗಳನ್ನು ಸ್ವಚ್ಛ ಸಾರಿಗೆ ಕೇಂದ್ರಗಳೆಂದು ಹಾಗೂ ರೈಲ್ವೆ ನಿಲ್ದಾಣದ ಆಟೋ ನಿಲ್ದಾಣ ಮತ್ತು ಗಾಯತ್ರಿಪುರಂನ ಜೈ ಕರ್ನಾಟಕ ಆಟೋ ನಿಲ್ದಾಣಗಳನ್ನು ಸ್ವಚ್ಛ ಆಟೋ ನಿಲ್ದಾಣಗಳೆಂದು ಗೌರವಿಸಲಾಯಿತು.
ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಜಿಐಝಡ್ ಸಂಸ್ಥೆಯ ನೀತು ಜೋಸೆಫ್, ಸ್ವಚ್ಚತಾ ರಾಯಭಾರಿಗಳಾದ ಚಿತ್ರನಟರಾದ ವಸಿಷ್ಠ ಸಿಂಹ, ಹರಿಪ್ರಿಯ, ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್, ಅರುಣ್ ಯೋಗಿರಾಜು ಅವರು ವಿಜೇತರಿಗೆ ಬಹುಮಾನ ವಿತರಿಸಿದರು.