ಕರ್ನಾಟಕ ರಾಜ್ಯ ಭೀಮ್ ಸೇನೆಯು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಅಂಗವಾಗಿ ಭಾನುವಾರ ಸಾಧಕರಿಗೆ ಪ್ರಶಸ್ತಿ ಪ್ರದಾನ, ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಏರ್ಪಡಿಸಿತ್ತು.\
ದಲಿತರು ಮೊದಲು ಇಟ್ಟಿಗೆಗೂಡು ಪ್ರದೇಶದಲ್ಲಿ ವಾಸವಾಗಿದ್ದರು. ಅರಮನೆಗೆ ಬೆಂಕಿ ಬಿದ್ದಾಗ ದೊಡ್ಡಕೆರೆಯಿಂದ ನೀರು ತಂದು ಬೆಂಕಿ ನಂದಿಸಿದರು. ಇದರ ಗೌರವಾರ್ಥ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದಲಿತರಿಗಾಗಿಯೇ ಸುಸಜ್ಜಿತವಾದ ಅಶೋಕಪುರಂ ಬಡಾವಣೆ ನಿರ್ಮಿಸಿಕೊಟ್ಟರು. ಈ ಕಾರಣದಿಂದ ಭೀಮ್‌ಸೇನೆ ವತಿಯಿಂದ ಅವರನ್ನು ಸ್ಮರಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದರು.
ಈ ದಿಸೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಂತೆ ವಿದ್ಯಾವಂತರಾಗಬೇಕು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಖ್ಯಾತ ಗಾಯಕ ಅಮ್ಮ ರಾಮಚಂದ್ರ, ಶಿಕ್ಷಕ ರಮೇಶ್ ತಾಯೂರು, ಆರೋಗ್ಯರಾಜ್, ಗಾಯಕ ಪ್ರದೀಪ್, ಸಮರ್ಪಣ ಸೇವಾ ಟ್ರಸ್ಟ್ ಸಂಸ್ಥಾಪಕ ಲಯನ್ ಕುಮಾರ್, ಸಮಾಜ ಸೇವಕ ಎಚ್. ಧರ್ಮರಾಜು ಹಾಗೂ ಕಲಾವಿದ ನಾರಾಯಣಸ್ವಾಮಿ ಅವರಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪುರಸ್ಕಾರ ನೀಡಲಾಯಿತು.
ಮೈಸೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಹಾಗೂ ಮಾಜಿ ಉಪ ಮೇಯರ್ ವಿ. ಶೈಲೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಸಾಮಾಜಿಕ ನ್ಯಾಯ ವೇದಿಕ ಅಧ್ಯಕ್ಷ ಎಂ.ಎಸ್. ಪರಾಮಾನಂದ ಮುಖ್ಯ ಅತಿಥಿಗಳಾಗಿದ್ದರು.
ವೇದಿಕೆಯ ರಾಜ್ಯಾಧ್ಯಕ್ಷಸರ್ವೇಶ್, ಪದಾಧಿಕಾರಿಗಳಾದ ಸಿ. ಮೋಹನಕುಮಾರ್, ನಯಾಜ್ ಪಾಷ, ಎನ್. ಬಸವಣ್ಣ, ಆರ್. ಮಹದೇವು, ಕುಮಾರಸ್ವಾಮಿ, ವಿ.ಎಂ. ಮಲ್ಲೇಶ್, ಕಾರ್ತಿಕ್ ಮರಿಯಪ್ಪ, ಬಾಲರಾಜು, ಡಿ. ಶಿವಣ್ಣ, ಸಿ. ರವಿಕುಮಾರ್, ಸಿ. ಚಂದ್ರು, ಎಂ.ಎಸ್. ಸಿದ್ದರಾಜು, ಸದಾಕುಮಾರ್, ನಾಗರಾಜು, ಶಿವಕುಮಾರ್, ಡಿ. ರವಿಚಂದ್ರ, ಕೃಷ್ಣ, ಹಿಟ್ನಹಳ್ಳಿ ದೇವರಾಜ್, ಎಂ.ಮಹೇಶ್ ಮೊದಲಾದವರು ಭಾಗವಹಿಸಿದ್ದರು.