ಸಾಲಿಗ್ರಾಮ: ತಾಲೂಕಿನ ಭೇರ್ಯ ಸರ್ಕಾರಿ ಪ್ರೌಢಶಾಲೆ
- ಕುಸಿಯುವ ಸ್ಥಿತಿಯಲ್ಲಿದೆ ಕಟ್ಟಡ
- ಮಕ್ಕಳ ದಾಹ ತಣಿಸುವ ಜೀವಜಲಕ್ಕೆ ಪರದಾಟ
- ಶೌಚಗೃಹಕ್ಕೆ ನೀರು ಪೂರೈಕೆ ಇಲ್ಲದೆ ಅಧ್ವಾನ
ಸಾಲಿಗ್ರಾಮ: ತಾಲೂಕಿನ ಭೇರ್ಯ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿ ಕಾಣದೆ ಕುಂಠಿತವಾಗಿದೆ. ಸಾಲು ಸಾಲು ಸಮಸ್ಯೆ ಎದುರಿಸುತ್ತಿದೆ. ಸಾವಿರ ದಾಟಿದ್ದ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ನೂರರೊಳಗೆ ಕುಸಿದಿದೆ.
ಸುಂದರವಾಗಿದ್ದ ಕಟ್ಟಡಗಳು ಈಗ ಶಿಥಿಲಗೊಂಡಿದ್ದು, ಕುಡಿಯುವ ನೀರಿಗಾಗಿ ಮಕ್ಕಳು ಪರದಾಡುವಂತಾಗಿದೆ.
ಆದರೂ ಸಂಬಂಧಪಟ್ಟ ಅಧಿಕಾರಿಗಳು. ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಜತೆಗೆ ದಾಖಲಾತಿಗೂ ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಸರ್ಕಾರಿ ಪ್ರೌಢಶಾಲೆ ಉಳಿಸಿಕೊಳ್ಳುವ ಜವಾಬ್ದಾರಿ ಯಾರದು ಎಂಬ ಪ್ರಶ್ನೆ ಗ್ರಾಮಸ್ಥರಲ್ಲಿ ಕಾಡುತ್ತಿದೆ.
ಪ್ರೌಢಶಾಲೆಯಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕೊಠಡಿಗಳಿವೆ. ಆದರೆ, ಒಂದು ಕೊಠಡಿಯೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಿಲ್ಲ. ಎಲ್ಲ ಕೊಠಡಿಗಳ ಛಾವಣಿ ಕಳಚುತ್ತಿದೆ. ಮಳೆ ನೀರು ಸೋರುತ್ತಿದೆ. ಜೀವಭಯದಲ್ಲಿ ವಿದ್ಯಾರ್ಥಿಗಳು ಪಾಠ, ಪ್ರವಚನ ಆಲಿಸುವ ಮತ್ತು ಊಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಪೇರಿ ಮಾಡಿಸಿ ಕೊಠಡಿ ಸರಿಮಾಡಿಸುವಂತೆ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
1990-91ರಲ್ಲಿ ನಿರ್ಮಾಣವಾಗಿರುವ ಆರು ಕೊಠಡಿಗಳ ಮೊದಲ ಕಟ್ಟಡ ಯಾವ ಕ್ಷಣದಲ್ಲಾದರೂ ಕುಸಿಯಬಹುದು. ಇದರಿಂದ ಮಕ್ಕಳು ಆತಂಕಗೊಂಡಿದ್ದು ಕೊಠಡಿ ಹತ್ತಿರ ಸುಳಿಯಲು ಭಯಪಡುವಂತಾಗಿದೆ. ಬೇರೆ ಕೊಠಡಿಗಳಿಗೆ ಹೋಗಲು ಈ ಕಟ್ಟಡದ ಅಕ್ಕಪಕ್ಕದಲ್ಲೇ ಹೋಗಬೇಕಿದೆ. ಈ ಹಳೇ ಕಟ್ಟಡದ ಸುತ್ತಮುತ್ತ ಹಾಗೂ ಸಂಪ್ ಒಳಗೆ ಹಾವು, ಚೇಳುಗಳಿಗ ಸೇರಿಕೊಳ್ಳುವ ಭೀತಿ ಹೆಚ್ಚಿಸಿದೆ.
ಶಾಲಾ ಕಟ್ಟಡ ನಿರ್ಮಾಣವಾದ ದಿನದಿಂದಲೂ ಇಲ್ಲಿಯವರೆಗೂ ಕುಡಿಯುವ ನೀರಿನ ಸಮಸ್ಯೆ ದೊಡ್ಡದಿದೆ. ಗ್ರಾಮ ಪಂಚಾಯಿತಿಯಿಂದ ಸಂಪರ್ಕ ಪಡೆದಿರುವ ಪೈಪ್‌ಲೈನ್‌ನಲ್ಲಿ ನೀರು ಶಾಲೆಗೆ ಬರುತ್ತಿಲ್ಲ. ಇದರಿಂದ ಮಕ್ಕಳು ಕುಡಿಯುವ ನೀರಿಗೂ ತೊಂದರೆಯಾಗಿದೆ.
ಜತೆಗೆ ಶೌಚಗೃಹಗಳಲ್ಲೂ ನೀರಿನ ವ್ಯವಸ್ಥೆ ಇಲ್ಲ. ಇದರಿಂದ ಬಾಲಕಿಯರು ಸಂಕಷ್ಟ ಎದುರಿಸುತ್ತಿದ್ದಾರೆ. ಶಾಲಾ ಆವರಣದಲ್ಲಿ ನಿರ್ಮಿಸಿರುವ ಸಂಪ್ ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿದೆ. ಸಂಪ್ ಸ್ವಚ್ಛಗೊಳಿಸಿ ನೀರಿನ ವ್ಯವಸ್ಥೆ ಮಾಡಿದರೂ ಕುಡಿಯಲು ಯೋಗ್ಯವಾದ ನೀರು ಸಿಗುವುದು ಸಾಧ್ಯ ಇಲ್ಲ. ಬದಲಾಗಿ ಶೌಚಗೃಹಕ್ಕೆ ಬಳಸಬಹುದಾದ ನೀರು ಪೂರೈಕೆ ಮಾಡಲು ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕಿದೆ.
ಶಾಲೆ ಕಟ್ಟಡದ ಸುತ್ತ ಮೂರು ಭಾಗಕ್ಕೆ ಮಾತ್ರ ಕಾಂಪೌಂಡ್ ನಿರ್ಮಾಣವಾಗಿದೆ. ಒಂದು ಭಾಗಕ್ಕೆ ಮಾತ್ರ ಇದೂವರೆಗೂ ಕಾಂಪೌಂಡ್ ನಿರ್ಮಾಣವಾಗಿಲ್ಲ. ಇದರಿಂದ ಪುಂಡರ ಕಾಟ ಹೆಚ್ಚಾಗಿದೆ. ಇದರಿಂದ ಶಾಲಾ ಆವರಣ ಪಾಳಾಗಲು ಕಾರಣವಾಗಿದೆ. ಸರ್ಕಾರದ ಆಸ್ತಿ ನಷ್ಟವಾಗುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತಾಗಿದೆ. ಶಾಲೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರೂ ಪ್ರಶ್ನೆ ಮಾಡುವುದಕ್ಕೆ ಯಾರೂ ಮುಂದಾಗುತ್ತಿಲ್ಲ. ಮಕ್ಕಳು ಆಟವಾಡಲು ಮೈದಾನ ಇಲ್ಲದ ಕಾರಣ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಅಭಿವೃದ್ಧಿಪಡಿಸಲು ಯಾರೂ ಆಸಕ್ತಿ ತೋರಿಸಿಲ್ಲ.
ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲ
9ನೇ ತರಗತಿಯಲ್ಲಿ 45 ವಿದ್ಯಾರ್ಥಿಗಳು, 10ನೇ ತರಗತಿಯಲ್ಲಿ 29 ವಿದ್ಯಾರ್ಥಿಗಳು ಇದ್ದಾರೆ. ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇದ್ದರೂ ದೈಹಿಕ ಶಿಕ್ಷಣ ಶಿಕ್ಷಕರೇ ಇಲ್ಲ. ಇದರಿಂದ ಇನ್ನಷ್ಟು ಕ್ರೀಡಾಪಟುಗಳು ಸಾಧನೆ ಮಾಡಲು ತರಬೇತಿ ನೀಡುವ ಮಾರ್ಗದರ್ಶಕರು ಇಲ್ಲದೆ ಅವಕಾಶದಿಂದ ವಂಚಿತರಾಗಬೇಕಿದೆ. ಹಾಗಾಗಿ ಸರ್ಕಾರ ಕೂಡಲೇ ಕೊರತೆ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಭೇರ್ಯ ಸರ್ಕಾರಿ ಪ್ರೌಢಶಾಲೆಯ ಹಳೇ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು ಈಗಾಗಲೇ ಇಂಜಿನಿಯರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಹೊಸ ಕಟ್ಟಡ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುತ್ತೇನೆ. ಸರ್ಕಾರಿ ಪ್ರೌಢಶಾಲೆ ಉಳಿಸಿಕೊಳ್ಳಲು ಪಾಲಕರು ಮತ್ತು ಸಾರ್ವಜನಿಕರು ಮಕ್ಕಳ ಪ್ರವೇಶಕ್ಕೆ ಶಿಕ್ಷಣ ಇಲಾಖೆಗೆ ಸಹಕಾರ ನೀಡಬೇಕು.
ಕ್ಷೇತ್ರ ಶಿಕ್ಷಣಾಧಿಕಾರಿ, ಕೆ.ಆರ್.ನಗರ
ಭೇರ್ಯ ಸರ್ಕಾರಿ ಶಾಲೆಗೆ ಕುಡಿಯುವ ನೀರು, ಸ್ವಚ್ಛತೆಗೆ ಗ್ರಾಮ ಪಂಚಾಯಿತಿ ಆದ್ಯತೆ ನೀಡಿಲ್ಲ. ಇದರಿಂದ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಜತೆಗೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಮೂಲಸೌಕರ್ಯಗಳು ಇಲ್ಲ ದ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ಹೇಗೆ ದಾಖಲಿಸುತ್ತಾರೆ. ಶಾಲೆಗೆ ಪ್ರೋತ್ಸಾಹ ನೀಡುವುದು ಇರಲಿ, ಮುಚ್ಚಿದರೂ ಯಾರೂ ಕೇಳುವವರು ಇಲ್ಲದಂತಾಗಿದೆ.
ದಿನೇಶ್ ಹಳೇ ವಿದ್ಯಾರ್ಥಿ, ಕಳ್ಳಿಮುದ್ದನಹಳ್ಳಿ
ಮೂಲ ಸೌಲಭ್ಯ ಕೊರತೆ ಇದೆ. ತುರ್ತಾಗಿ ಕುಡಿಯುವ ನೀರು ಮತ್ತು ಸ್ವಚ್ಛತೆ ಜತೆಗೆ ಕೊಠಡಿಗಳ ರಿಪೇರಿ ಆಗಬೇಕಿದೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 5 ವಿದ್ಯಾರ್ಥಿನಿಯರು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಹಾಗಾಗಿ ಅಗತ್ಯ ಇರುವ ಸೌಲಭ್ಯಗಳನ್ನು ನೀಡಿದರೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಜತೆಗೆ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಮುಂದಾಗಬೇಕು.
ಮುಖ್ಯಶಿಕ್ಷಕ, ಸರ್ಕಾರಿ ಪ್ರೌಢಶಾಲೆ