ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಭೀಮೋತ್ಸವ ಸಮಾರಂಭವನ್ನು ಮಾಜಿ ಸಚಿವ ಎನ್.ಮಹೇಶ್ ಉದ್ಘಾಟಿಸಿದರು. ಮುಖಂಡರಾದ ಬಸವಲಿಂಗಯ್ಯ, ದೇವರಾಜ ಒಡೆಯರ್, ಪುಟ್ಟಮಾದಯ್ಯ, ದೇವರಾಜ ಒಡೆಯರ್, ದೊಡ್ಡಹೆಜ್ಜೂರು ರಮೇಶ್ ಇತರರಿದ್ದಾರೆ. 
ಮೈಸೂರು

ಒಳಮೀಸಲಾತಿ ಜಟಾಪಟಿಯಲ್ಲಿ ಶತ್ರುಗಳಂತೆ ಕಿತ್ತಾಡಿದ್ದೇವೆ

ನಾಗೇಶ ಎಸ್
ಹುಣಸೂರು: ವಿದ್ಯಾರ್ಥಿಗಳು ಆಂಗ್ಲಭಾಷೆಯ ಪ್ರೌಢಿಮೆ, ಸಂವಹನ ಕೌಶಲ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದ್ದಲ್ಲಿ ಮಾತ್ರ ಸಂಘಟಿತ ವಲಯದಲ್ಲಿ ಉದ್ಯೋಗ ಗಳಿಸುವ ಅಥವಾ ಸ್ವಯಂ ದ್ಯೋಗಿಗಳಾಗಲು ಸಾಧ್ಯವೆಂದು ಮಾಜಿ ಸಚಿವ ಎನ್.ಮಹೇಶ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಭೀಮೋತ್ಸವ ಆಯೋಜನಾ ಸಮಿತಿ ವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಅಂಗವಾಗಿ ಭೀಮೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಜನಾಂಗದ ವಿದ್ಯಾರ್ಥಿಗಳು ಇತ್ತೀಚಿನ ವರ್ಷಗಳಲ್ಲಿ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಅಂಬೇಡ್ಕರ್ ಜಯಂತಿ ಆಚರಣೆ ವೇಳೆ ತಾಲೂಕಿನಲ್ಲಿ ಭೀಮೋತ್ಸವ ಆಚರಿಸುತ್ತಿದ್ದೀರಿ. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗುರುತಿಸಿ ಸನ್ಮಾನಿಸುತ್ತಿರುವುದು ಕಾರ್ಯಕ್ರಮಕ್ಕೆ ಸಮಯೋಚಿತವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಇಂದಿನ ಆಧುನಿಕ ಯುಗದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕಿದೆ. 1901ರಲ್ಲಿ ದೇಶದ ಸಾಕ್ಷರತೆ ಕೇವಲ ಶೇ.6ರಷ್ಟಿತ್ತು. 1951ರಲ್ಲಿ ಇದರ ಪ್ರಮಾಣ ಶೇ.16 ತಲುಪಿತ್ತು. ಇದೀಗ 2026ಕ್ಕೆ ಶೇ.76ರಷ್ಟು ತಲುಪಿದೆ. 2047ರಲ್ಲಿ ಪ್ರಧಾನಿಯವರ ಆಶಯದಂತೆ ಭಾರತ ವಿಕಸಿತ ಭಾರತವಾಗಲಿದೆ. ಆಗ ದೇಶದಲ್ಲಿ ಶೇ.100ರ ಸಾಕ್ಷರ ಪ್ರಮಾಣ ಆಗಬೇಕಿದೆ. ಇದೀಗ ಉದ್ಯೋಗ ಮಾರುಕಟ್ಟೆ ಹೇಗಿದೆ ಎನ್ನುವ ಕಲ್ಪನೆ ವಿದ್ಯಾರ್ಥಿಗಳಲ್ಲಿರಬೇಕು. ಸಂಘಟಿತ ವಲಯದಿಂದ ಶೇ.12ರಷ್ಟು ಮಾತ್ರ ಉದ್ಯೋಗಾವಕಾಶ ಇದೆ. ಮಿಕ್ಕ ಎಲ್ಲವೂ ಖಾಸಗಿ ವಲಯಕ್ಕೆ ಸೇರಿದೆ. ಇಂತಹ ಪೈಪೋಟಿ ಸಮಯದಲ್ಲಿ ಇಂಗ್ಲಿಷ್ ಜ್ಞಾನ, ಸಂವಹನ ಕೌಶಲ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿದವರು ಮಾತ್ರ ಉದ್ಯೋಗ ಗಳಿಸಬಲ್ಲ ಅಥವಾ ಸ್ವಯಂ ಉದ್ಯೋಗಿಯಾಗುವ ಮೂಲಕ ಇತರ ಕೈಗಗಳಿಗೆ ಉದ್ಯೋಗ ನೀಡಬಲ್ಲರು. ನಿಮ್ಮ ಗುರಿ ಈ ನಿಟ್ಟಿನಲ್ಲಿರಲಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ಯಾರಂಟಿ ಅವಾಂತರ:
ನಾನು ಒಳಮೀಸಲಾತಿ ವಿರೋಧಿಯಲ್ಲ. ಆದರೆ ಒಳಮೀಸಲಾತಿಯ ಜಟಾಪಟಿಯಲ್ಲಿ ನಾವೆಲ್ಲರೂ ಮುಖ ಪರಚಿಕೊಂಡು ಜನ್ಮ ಜನ್ಮದ ಶತ್ರುಗಳಂತೆ ಕಿತ್ತಾಡಿದ್ದೇವೆ. ಏತಕ್ಕಾಗಿ? ಕೇವಲ 10-15 ಸಾವಿರ ಉದ್ಯೋಗ ಗಳಿಸಲು. ಇಷ್ಟು ಉದ್ಯೋಗದಿಂದ 10-15 ಸಾವಿರ ಕುಟುಂಬಗಳಿಗೆ ಅಂದಾಜು 480 ಕೋಟಿ ರೂ. ಆರ್ಥಿಕ ನೆರವು ಸಿಗಬಲ್ಲದು. ಆದರೆ ಗ್ಯಾರಂಟಿಯ ಹೆಸರಿನಲ್ಲಿ ನಮಗೆ ಮೀಸಲಿರಿಸಿದ್ದ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯ 42 ಸಾವಿರ ಕೋಟಿ ರೂ. ಹಣ ಮೋಸವಾಗುತ್ತಿದೆಯಲ್ಲ? ಇದನ್ನು ನಾವ್ಯಾರೂ ಕೇಳುತ್ತಿಲ್ಲವೇಕೆ? ಇಷ್ಟು ಹಣದಲ್ಲಿ ನಮ್ಮ ಸಮುದಾಯದ 80 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ವಸತಿ, ಗಂಗಾಕಲ್ಯಾಣ, ಸ್ವಯಂಉದ್ಯೋಗ ಎಲ್ಲವನ್ನೂ ನೀಡಬಹುದಿತ್ತಲ್ಲ. ಈ ಕುರಿತು ನಾವ್ಯೇಕೆ ಹೋರಾಟ ಮಾಡುತ್ತಿಲ್ಲ. ರಾಜಕೀಯ ಪಕ್ಷಗಳ ಅನಿವಾರ್ಯತೆ ನಮ್ಮನ್ನು ಸುಮ್ಮನಾಗಿಸಿರುವುದು ವಿಪರ್ಯಾಸವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಈ ಕುರಿತು ಜನಾಭಿಪ್ರಾಯ ಸಂಗ್ರಹಕ್ಕಾಗಿ ಬಹಿರಂಗ ಚರ್ಚೆ, ಆಂದೋಲನ ಮತ್ತು ಅಂತಿಮವಾಗಿ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ಹಣ ಹೇಗೆ ಖರ್ಚು ಮಾಡಬೇಕೆನ್ನುವುದನ್ನು ಸರ್ಕಾರಕ್ಕೆ ನಾವು ಸೂಚಿಸುವ ಡಿಕ್ಲರೇಷನ್ ಹೊರಡಿಸುವ ಹಂತವರೆಗೆ ಹೋರಾಟ ನಡೆಸೋಣ ಎಂದರು.
ಸಮಾರಂಭದಲ್ಲಿ 98 ಮಂದಿ ಎಸ್‌ಎಸ್‌ಎಲ್ ಮತ್ತು 72 ಪಿಯು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಮಾರಂಭಕ್ಕೂ ಮುನ್ನ ನೂರಾರು ದಲಿತ ಯುವಕರು ಬೈಕ್ ರ‌್ಯಾಲಿ ನಡೆಸಿ ಸಂಭ್ರಮಿಸಿದರು. ಕಾರ್ಯಕ್ರಮಲ್ಲಿ ದಲಿತ ಮುಖಂಡರಾದ ದೇವರಾಜ ಒಡೆಯರ್, ತರೀಕಲ್ ರಾಜು, ದೊಡ್ಡಹೆಜ್ಜೂರು ರಮೇಶ್, ಬಸವಲಿಂಗಯ್ಯ, ರಾಜಣ್ಣ ಬಿಳಿಕೆರೆ, ಕುಮಾರ್ ಮಂಟಿಕೊಪ್ಪಲು, ಪ್ರಸನ್ನ ಸೋಮನಹಳ್ಳಿ, ದೊಡ್ಡಹೆಜ್ಜೂರು ನಾಗೇಶ್, ಸಂತೋಷ್‌ಕುಮಾರ್, ಕಿರಣ್, ಗಜೇಂದ್ರ, ನಿಂಗರಾಜ್ ಮಲ್ಲಾಡಿ, ಅಣ್ಣಯ್ಯನಾಯಕ, ಹೊನ್ನಪ್ಪ, ವರದರಾಜು, ಸತ್ಯಪ್ಪ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪುಟ್ಟಮಾದಯ್ಯ, ಮಹದೇವಮ್ಮ,. ಎಚ್.ವೈ.ಮಹದೇವ್ ಇದ್ದರು.