ಸರಗೂರು ತಾಲೂಕಿನ ಚನ್ನೀಪುರ ಗ್ರಾಮದ ದೇವತೆ ಹಾಗೂ ಭೈರವೇಶ್ವರಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
ಸರಗೂರು: ತಾಲೂಕಿನ ಚೆನ್ನಿಪುರದಲ್ಲಿ ಗ್ರಾಮ ದೇವತೆ ಮಾರಮ್ಮ ಹಾಗೂ ಭೈರವೇಶ್ವರಸ್ವಾಮಿ ಜಾತ್ರೆ ಅಂಗವಾಗಿ ಕೊಂಡೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನವನ್ನು ಬಣ್ಣ, ಹೂವುಗಳಿಂದ ಅಲಂಕೃತಗೊಳಿಸಿ ಸಿಂಗರಿಸಲಾಗಿತ್ತು. ಅಲ್ಲದೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ದೇವರಿಗೆ ವಿವಿಧ ಪೂಜೆಗಳು ನೆರವೇರಿದವು. ಪ್ರಧಾನ ದೇವತೆ, ಪರಿವಾರ ದೇವತೆಗಳ ಕಳಸ ಸ್ಥಾಪನೆ ಮತ್ತು ಪೂಜೆ, ವಿಗ್ರಹ ಪೂಜೆಗಳು ನಡೆದವು.
ಗ್ರಾಮದೇವತೆ ಮಾರಮ್ಮ ಹಾಗೂ ಭೈರವೇಶ್ವರ ಮೂಲ ದೇವರಿಗೆ ಪ್ರಧಾನ ದೇವತಾ ಪೂಜೆ, ಹೋಮ ಸೇರಿದಂತೆ ಮಹಾಮಂಗಳಾರತಿ ರಾಜೋಪಚಾರ, ತೀರ್ಥಪ್ರಸಾದ ವಿನಿಯೋಗ ನಡೆಸಲಾಯಿತು. ದೇವರ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿ, ಗಂಗೆ ಪೂಜೆ ಸಲ್ಲಿಸಲಾಯಿತು.
ವಾದ್ಯಗೋಷ್ಠಿಗಳೊಂದಿಗೆ ಸತ್ತಿಗೆ, ದೇವರ ವಿಗ್ರಹ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ಸಮೀಪದಲ್ಲಿರುವ ಭೈರವೇಶ್ವರ ದೇವಸ್ಥಾನದಲ್ಲಿ ನಡೆದ ಕೊಂಡೋತ್ಸವದಲ್ಲಿ ಭಕ್ತರು ಪಾಲ್ಗೊಂಡು ಹರಕೆ ತೀರಿಸಿದರು. ನಂತರ ಭಕ್ತರಿಗೆ ತೀರ್ಥಪ್ರಸಾದ, ಅನ್ನ ಸಂತರ್ಪಣೆ ನಡೆಯಿತು.
ಗುಡಿಗೌಡರು ಬೋಳೇಗೌಡ , ಯಜಮಾನರಾದ ಪುಟ್ಟರಾಜು, ಮಣಿಕಂಠ, ಸಿದ್ದರಾಜು, ಮುಖಂಡರಾದ ಗ್ರಾಪಂ ಸದಸ್ಯ ಶಂಭು ಗೌಡ, ಮಲ್ಲೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಲುವರಾಜು, ಶಿವಣ್ಣ, ರವಿಕುಮಾರ್, ಗ್ರಾಮಸ್ಥರು ಹಾಜರಿದ್ದರು.