ತಿ.ನರಸೀಪುರ ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಉಪ್ಪಾರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು. 
ಮೈಸೂರು

ಭಗೀರಥರ ದೃಢಸಂಕಲ್ಪ ಎಲ್ಲರಿಗೂ ಸ್ಫೂರ್ತಿದಾಯಕ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಟಿ.ಜೆ.ಸುರೇಶಾಚಾರ ಅಭಿಮತ
ತಿ.ನರಸೀಪುರ: ಭಗೀರಥರು ಗಂಗೆಯನ್ನು ಭೂಲೋಕಕ್ಕೆ ತರಲು ಮಾಡಿದ ತಪಸ್ಸು ಕೇವಲ ಒಂದು ಪೌರಾಣಿಕ ಘಟನೆಯಲ್ಲ, ಅದು ಮಾನವ ಶಕ್ತಿಯು ಎಷ್ಟು ದೊಡ್ಡ ಸಾಧನೆಗಳನ್ನು ಮಾಡಬಲ್ಲದು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ತಹಸೀಲ್ದಾರ್ ಟಿ. ಜೆ.ಸುರೇಶಾಚಾರ್ ಹೇಳಿದರು.
ತಾ.ಪಂ. ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಉಪ್ಪಾರ ಸಂಘದ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಭಗೀರಥರು ಮಾಡಿದ ತಪಸ್ಸು ಮತ್ತು ಅವರ ಸಂಕಲ್ಪ ಬಲವು ನಮ್ಮ ಜೀವನಕ್ಕೆ ಆದರ್ಶವಾಗಬೇಕು. ಭಗೀರಥರು ಎಂದರೆ ತ್ಯಾಗ, ಪರಿಶ್ರಮದ ಪ್ರತೀಕ ಹಾಗೂ ಸಂಕಲ್ಪ ಬಲದ ಜೀವಂತ ಉದಾಹರಣೆ. ತಮ್ಮ ಪೂರ್ವಜರ ಮೋಕ್ಷಕ್ಕಾಗಿ ಗಂಗೆಯನ್ನು ಭೂಲೋಕಕ್ಕೆ ತರಲು ಅವರು ಮಾಡಿದ ತಪಸ್ಸು ಅಸಾಧಾರಣ. ದೇವತೆಗಳನ್ನೂ ಕೂಡ ಮನವೊಲಿಸುವಷ್ಟು ಅವರ ಧೈರ್ಯ ಮತ್ತು ದೃಢಸಂಕಲ್ಪ ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.
ಸಾಧನೆಗೆ ಶ್ರಮವೇ ಮಾರ್ಗ, ಯಾವ ಕೆಲಸವಾದರೂ ದೃಢನಿಶ್ಚಯದಿಂದ ಮಾಡಿದರೆ ಅದು ಖಂಡಿತ ಯಶಸ್ವಿಯಾಗುತ್ತದೆ. ಇಂದಿನ ಯುವಪೀಳಿಗೆ ಭಗೀರಥರ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು. ಇಂದಿನ ಸಮಾಜದಲ್ಲಿ ನಾವು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರ ಬೇಕಾದರೆ, ಭಗೀರಥರಂತೆ ನಿರಂತರ ಪ್ರಯತ್ನ, ಧೈರ್ಯ ಮತ್ತು ಸಮಾಜದ ಬಗ್ಗೆ ಕಾಳಜಿ ಅಗತ್ಯ. ಅವರು ಮಾಡಿದ ತಪಸ್ಸು ಕೇವಲ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಸಮಸ್ತ ಮಾನವಕುಲದ ಒಳಿತಿಗಾಗಿ ಆಗಿತ್ತು. ಹಾಗಾಗಿ ಸಮಾಜ ಸೇವೆ, ನಿಷ್ಠೆ ಮತ್ತು ಶ್ರಮವೇ ನಮ್ಮ ಬದುಕಿನ ಮೂಲಮಂತ್ರವಾಗಬೇಕು ಎಂದು ತಿಳಿಸಿದರು.
ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಸೋಮಣ್ಣ ಮಾತನಾಡಿ, ಭಗೀರಥ ಮಹರ್ಷಿಗಳು ಮಾಡಿದ ಸಾಧನೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಸಮಸ್ತ ಜನಾಂಗದ ಒಳಿತಿಗಾಗಿ ಆಗಿತ್ತು. ಇದೇ ನಿಜವಾದ ಮಹತ್ವ. ಇಂದಿನ ಯುವಪೀಳಿಗೆಗೆ ಭಗೀರಥರ ಆದರ್ಶಗಳು ಅತ್ಯಂತ ಅಗತ್ಯ. ಪರಿಶ್ರಮ, ನಿಷ್ಠೆ, ಶ್ರದ್ಧೆ ಮತ್ತು ಸಮಾಜದ ಬಗ್ಗೆ ಕಾಳಜಿ ಇವುಗಳನ್ನು ನಾವು ಅಳವಡಿಸಿಕೊಂಡಾಗ ಮಾತ್ರ ನಮ್ಮ ಬದುಕು ಅರ್ಥಪೂರ್ಣವಾಗುತ್ತದೆ ಎಂದು ತಿಳಿಸಿದರು.
ಉಪ್ಪಾರ ಸಮಾಜದ ಹಿರಿಯ ಮುಖಂಡ ಗೋವಿಂದಶೆಟ್ಟಿ ಮಾತನಾಡಿ, ಭಗೀರಥರದ್ದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿಯೇ ಅಪ್ರತಿಮ ವ್ಯಕ್ತಿತ್ವ. ಅವರ ಜೀವನವೇ ಪರಿಶ್ರಮ, ತ್ಯಾಗ ಮತ್ತು ಅಚಲ ಸಂಕಲ್ಪದ ಜೀವಂತ ಸಂದೇಶವಾಗಿದೆ. ಇಂದಿನ ದಿನದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳು ಬೇರೆ ರೀತಿಯದ್ದಾಗಿದ್ದರೂ ಅವುಗಳನ್ನು ಎದುರಿಸುವ ಮನೋಬಲ ಭಗೀರಥರಿಂದಲೇ ಕಲಿಯಬೇಕಾಗಿದೆ. ಸಮಾಜದಲ್ಲಿ ಶುದ್ಧತೆ, ಶಿಸ್ತು ಮತ್ತು ಸಹಕಾರ ಇವುಗಳನ್ನು ಬೆಳೆಸುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮಹತ್ವದ್ದಾಗಿದೆ.ಇಂದಿನ ಸಮಾಜದಲ್ಲಿ ನಾವು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದರೆ ಭಗೀರಥರಂತೆ ನಾವು ದೃಢಸಂಕಲ್ಪ ಹೊಂದಿದರೆ ಯಾವುದೇ ಸಮಸ್ಯೆಯನ್ನು ಗೆಲ್ಲಬಹುದು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಸಿದ್ದಪ್ಪ ಸ್ವಾಮಿ, ಉಪಾಧ್ಯಕ್ಷ ಹಾಗೂ ಡೇರಿ ಅಧ್ಯಕ್ಷ ಚಿಕ್ಕಸ್ವಾಮಿ, ಗೌರವಾಧ್ಯಕ್ಷ ರಾಮಶೆಟ್ಟಿ, ಕೇತಹಳ್ಳಿ ಸಿದ್ದಶೆಟ್ಟಿ, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ಮರಿಸ್ವಾಮಿ, ಚಿನ್ನಸ್ವಾಮಿ, ಕೆ.ಮಹದೇವ ಶೆಟ್ಟಿ, ರಾಜೇಂದ್ರ, ಮಹೇಶ್, ಕೊತ್ತೆಗಾಲ ಮಹದೇವು, ರಾಚಪ್ಪಾಜಿ, ಸಿದ್ದಶೆಟ್ಟಿ, ಗ್ರಾಪಂ. ಸದಸ್ಯೆ ಗೀತಾ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ. ಪ್ರಕಾಶ್, ತೋಂಟೇಶ್, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಅಕ್ಬರ್ ಪಾಷಾ, ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜಣ್ಣ, ಸಿಡಿಪಿಒ ಗೋವಿಂದರಾಜು, ಸೆಸ್ಕ್ ಕಾರ್ಯಪಾಲಕ ಅಭಿಯಂತರ ವೀರೇಶ್, ಬಿಇಒ ಶಿವಮೂರ್ತಿ, ಬಿಆರ್‌ಸಿ ನಾಗೇಶ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಬಿ. ಶ್ವೇತಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಎಂ.ರೂಪಾ ಹಾಗೂ ತಾಲೂಕಿನ ಉಪ್ಪಾರ ಸಮಾಜದ ಮುಖಂಡರು ಇತರರು ಇದ್ದರು.