ಬೆಟ್ಟದಪುರ ಸಮೀಪದ ಬೆಟ್ಟದತುಂಗ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. 
ಮೈಸೂರು

ಹದಿಹರೆಯದ ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಅಗತ್ಯ

ಬೆಟ್ಟದಪುರ: ಎಲ್ಲ ಹೆಣ್ಣು ಮಕ್ಕಳಿಗೆ ಹದಿಹರೆಯ ಎಂಬುದು ಜೀವನದ ಪ್ರಮುಖ ಹಂತವಾಗಿದ್ದು, ಮನಸ್ಸು ಮತ್ತು ಭಾವನಾತ್ಮಕವಾಗಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ ಎಂದು ವೈದ್ಯಾಧಿಕಾರಿ ಡಾ.ಹರ್ಷಿತಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಬೆಟ್ಟದತುಂಗ ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ ಬೆಟ್ಟದತುಂಗ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಹದಿಹರೆಯದ ಹೆಣ್ಣು ಮಕ್ಕಳಿಗೆ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಿಶೋರಾವಸ್ಥೆ 10ರಿಂದ 19 ವರ್ಷಗಳ ವಯಸ್ಸಿನ ಅವಧಿಯಾಗಿದೆ. ಈ ಸಮಯದಲ್ಲಿ ದೈಹಿಕ ಬೆಳವಣಿಗೆ, ಧ್ವನಿಯ ಬದಲಾವಣೆ, ಎತ್ತರ ಹೆಚ್ಚಾಗುವುದು, ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಭಾವನಾತ್ಮಕ ಏರುಪೇರು ಉಂಟಾಗುತ್ತದೆ. ಈ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ ಮುಖ್ಯವಾಗಿದೆ. ಹಣ್ಣು, ತರಕಾರಿ, ಹಾಲು, ಮೊಟ್ಟೆ, ಕಾಳುಗಳು ನಾವು ಪ್ರತಿದಿನ ಸೇವಿಸಬೇಕಾದ ಆಹಾರಗಳಾಗಿವೆ. ಜಂಕ್‌ಫುಡ್‌ಗಳು ದೇಹಕ್ಕೆ ಹಾನಿಕಾರಕ ಎಂದು ಸಲಹೆ ನೀಡಿದರು.
ಮಕ್ಕಳು ನಿತ್ಯ ವ್ಯಾಯಾಮ, ಯೋಗ, ಓಡಾಟ, ಆಟಗಳ ಮೂಲಕ ದೇಹವನ್ನು ಸದೃಢವಾಗಿಡಬೇಕು. ಇದರಿಂದ ಮನಸ್ಸಿಗೂ ಸಂತೋಷ ಸಿಗುತ್ತದೆ. ಯಾವುದೇ ಸಮಸ್ಯೆಗಳು ಕಂಡುಬಂದಾಗ ಹಿಂಜರಿಕೆ ಮಾಡಿಕೊಳ್ಳದೆ ಪಾಲಕರ, ಶಿಕ್ಷಕರ ಅಥವಾ ವೈದ್ಯರನ್ನು ಸಂಪರ್ಕಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ, ಸಿಬ್ಬಂದಿ ಎಂ.ಕೆ.ಮಮತಾ, ಜೆ.ಎಸ್.ಅನಿಲ್ ಹಾಗೂ ಶಿಕ್ಷಕರು ಇದ್ದರು.