ಬೆಟ್ಟದಪುರದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಲೀಲಾವತಿ, ರಾಜಶೇಖರ್, ಪ್ರೀತಿ, ವಿಜಯ್ ಕುಮಾರ್, ಮಲ್ಲೇಶ್, ಲಕ್ಷ್ಮೀ, ದೇವರಾಜು ಇದ್ದರು.
ಬೆಟ್ಟದಪುರ: ಮಹಿಳೆಯರನ್ನು ಜಾಗೃತಿಗೊಳಿಸಿ ಆರ್ಥಿಕ ಪ್ರಜ್ಞಾವಂತಿಕೆಯನ್ನು ಬೆಳೆಸುವ ಕೆಲಸ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ. ರಾಜ್ಯದಲ್ಲಿ ಶ್ರೀ ಕ್ಷೇತ್ರದ ಸೇವೆ ಶ್ಲಾಘನೀಯ ಎಂದು ಬೆಟ್ಟದಪುರ ಕನ್ನಡ ಮಠದ ಶ್ರೀ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ವಿನಾಯಕ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಾ ಗ್ರಾಮಗಳ ಅಭಿವೃದ್ಧಿ ಮಾತ್ರವಲ್ಲ, ಮನುಷ್ಯ ಮನುಷ್ಯರ ಮನಸ್ಸುಗಳನ್ನು ಜೋಡಿಸುವ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಮಾನವೀಯ ಕಾರ್ಯಗಳಿಗೂ ಆದ್ಯತೆ ನೀಡುತ್ತದೆ. ಪೂಜೆಯ ಮುಖ್ಯ ಅರ್ಥ ಸತ್ಯ, ನೀತಿ ಮತ್ತು ಭಕ್ತಿ, ಶುದ್ಧ ಮನಸ್ಸು, ಸತ್ಯನಿಷ್ಠೆ ಸುಳ್ಳು, ಮೋಸ, ಅಳುಕು, ತಪ್ಪು ನಡವಳಿಕೆಗಳನ್ನು ದೂರವಿಟ್ಟು ನೈತಿಕ ಜೀವನ ನಡೆಸುವುದು. ಜಾತಿ ಧರ್ಮ ನೋಡದೆ ಸಮಾನ ದೃಷ್ಟಿಯಿಂದ ನೋಡುವುದು. ಮನೆ, ಕುಟುಂಬ, ಸಮಾಜ ಮತ್ತು ಗ್ರಾಮಕ್ಕೆ ಸಹಾಯ ಮಾಡುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಯೋಜನೆ ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಧಾರ್ಮಿಕ, ಸಾಮಾಜಿಕ ಏಕತೆಗಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಒಟ್ಟಾಗಿ ಸೇರಿ ಭಕ್ತಿ, ಸೌಹಾರ್ದತೆ ಮತ್ತು ಶಾಂತಿಯಿಂದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಕುಟುಂಬ, ಸಮಾಜ ಒಗ್ಗಟ್ಟು ಬಲಿಷ್ಠವಾಗುವುದರ ಜತೆಗೆ ಆತ್ಮೀಯತೆ ಬೆಳೆಯುತ್ತದೆ ಎಂದು ಹೇಳಿದರು.
ಪಿಎಸ್‌ಐ ಅಜಯ್ ಕುಮಾರ್ ಮಾತನಾಡಿ, ನಮ್ಮ ಸುತ್ತಮುತ್ತಲ ನಡೆಯುವ ಅಪರಾಧಗಳನ್ನು ತಡೆಯುವಲ್ಲಿ ಆರಕ್ಷಕ ಇಲಾಖೆಯೊಂದಿಗೆ ಪ್ರತಿಯೊಬ್ಬರು ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿರುವ ಸೈಬರ್ ಕ್ರೈಂ ಅಪರಾಧಗಳನ್ನು ತಡೆಗಟ್ಟಬಹುದು. ಜನರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ಮಹಿಳಾ ಸದಸ್ಯರಿಂದ ಅರಿವು ಮೂಡಿಸುವಂತಹ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್, ಪ್ರೀತಿ ಅರಸ್, ವಿಜಯ್ ಕುಮಾರ್, ಪೂಜಾ ಸಮಿತಿ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಲಕ್ಷ್ಮೀ, ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ.ದೇವರಾಜು, ಅರ್ಚಕ ಶ್ರೀಕಂಠ ಆರಾಧ್ಯ, ಮುಖಂಡರಾದ ಲೋಕೇಶ್, ಶಿವಕುಮಾರ್, ಪರಮೇಶ್, ವಿಶ್ವನಾಥ್, ಮಂಜುನಾಥ್, ಮಲ್ಲೇಶ್, ಶಂಕರೇಗೌಡ, ಯೋಜನಾಧಿಕಾರಿ ಸಂತೋಷ್, ಕೃಷಿ ಮೇಲ್ವಿಚಾರಕ ವಿನಾಯಕ್ ಪೂಜಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಮಿತಾ, ಮೇಲ್ವಿಚಾರಕಿ ಸುನೀತಾ, ಬೆಕ್ಕರೆ ಸತೀಶ್ ಆರಾಧ್ಯ, ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಇದ್ದರು.