ಭುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಬೆಕ್ಕರೆ ಪ್ರೀಮಿಯರ್ ಲೀಗ್ (ಬಿಪಿಎಲ್) ಸೀಸನ್-3 ಚಾಂಪಿಯನ್ ಪಟ್ಟವನ್ನು ಬೆಕ್ಕರೆ ನೈಟ್ ರೈಡರ್ಸ್ ತಂಡ ಪಡೆದುಕೊಂಡಿತ್ತು. 
ಮೈಸೂರು

ಬೆಕ್ಕರೆ ನೈಟ್ ರೈಡರ್ಸ್ ತಂಡ ಚಾಂಪಿಯನ್

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಭುವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಬೆಕ್ಕರೆ ಪ್ರೀಮಿಯರ್ ಲೀಗ್ (ಬಿಪಿಎಲ್) ಸೀಸನ್-3 ಚಾಂಪಿಯನ್ ಪಟ್ಟ ಬೆಕ್ಕರೆ ನೈಟ್ ರೈಡರ್ಸ್ ತಂಡದ ಪಾಲಾಯಿತು.
ಭುವನಹಳ್ಳಿ ಗ್ರಾಮದ ಹೊರ ವಲಯದ ಶ್ರೀ ಮೂರುರಮ್ಮ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರದಿಂದ ಮೂರು ದಿನಗಳವರೆಗೆ ನಡೆದ ಬೆಕ್ಕರೆ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ಪ್ರಶಸ್ತಿಗಾಗಿ ಒಟ್ಟು 8 ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯಿತು. ಪ್ರತಿ ವರ್ಷ ಯುಗಾದಿ ಹಬ್ಬದ ವೇಳೆ ಗ್ರಾಮದವರಿಗಾಗಿ ಕ್ರಿಕೆಟ್ ಟೂರ್ನಿಯನ್ನು ಕಳೆದ ಮೂರು ವರ್ಷಗಳಿಂದ ಆಯೋಜಿಸಲಾಗುತ್ತಿದೆ . ಎಲ್ಲ ತಂಡಗಳಲ್ಲಿಯೂ ಗ್ರಾಮದ ಆಟಗಾರರು ಮಾತ್ರ ಭಾಗವಹಿಸಿದ್ದು ವಿಶೇಷವಾಗಿತ್ತು.
ರೋಚಕತೆಯಿಂದ ನಡೆದ ಬೆಕ್ಕರೆ ಭೀಮ್ ರೈಡರ್ಸ್ ಹಾಗೂ ಬೆಕ್ಕರೆ ನೈಟ್ ರೈಡರ್ಸ್ ನಡುವಿನ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದೀಪು ನಾಯಕತ್ವದ ಭೀಮ್ ರೈಡರ್ಸ್ ತಂಡ ನಿಗದಿತ 5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದ ಸವಾಲು ಸ್ವೀಕರಿಸಿದ ಯತೀಶ್ ಮಾಲೀಕತ್ವದ ನವೀನ್ ನಾಯಕತ್ವದ ಬೆಕ್ಕರೆ ನೈಟ್ ರೈಡರ್ಸ್ ತಂಡ 4.3 ಓವರ್‌ಗಳಲ್ಲಿ ಐದು ವಿಕೆಟ್ ಕಳೆದುಕೊಂಡು 31 ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.
ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಕ್ಕರೆ ನೈಟ್ ರೈಡರ್ಸ್ ತಂಡದ ಸುಪ್ರೀತ್ ಸರಣಿ ಪುರುಷೋತ್ತಮ ಹಾಗೂ ಉತ್ತಮ ಬೌಲರ್ ಪ್ರಶಸ್ತಿ ಪಡೆದರೆ, ರಾಯಲ್ ಚಾಲೆಂಜರ್ಸ್ ತಂಡದ ದರ್ಶನ್ ಉತ್ತಮ ಬ್ಯಾಟರ್ ಪ್ರಶಸ್ತಿ ಪಡೆದರು. ಪ್ರತಿ ಪಂದ್ಯಕ್ಕೂ ಉತ್ತಮ ಆಟಗಾರ ಪ್ರಶಸ್ತಿ ನೀಡಲಾಯಿತು. ಟೂರ್ನಿಯಲ್ಲಿ ಭಾಗವಹಿಸಿದ ಎಲ್ಲ ತಂಡದ ಮಾಲೀಕರಿಗೆ ಬಹುಮಾನ ನೀಡಲಾಯಿತು.
ದಿವಾಕರ್ ಮಾಲಿಕತ್ವದ ನಂದೀಶ್ ಶರ್ಮಾ ನಾಯಕತ್ವದ ಬೆಕ್ಕರೆ ಇಂಡಿಯನ್ಸ್ ಮೂರನೇ ಹಾಗೂ ಭರತ್ ಮಾಲಿಕತ್ವದ ಶ್ರೀನಿವಾಸ್ ನಾಯಕತ್ವದ ಸನ್ ರೈಸರ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು. ಕೀರ್ತಿ ನಾಯಕತ್ವದ ದರ್ಶನ್ ಮಾಲೀಕತ್ವದ ರಾಯಲ್ ಚಾಲೆಂಜರ್ಸ್, ವೃಷಭೇಂದ್ರ ಮಾಲಿಕತ್ವದ ವಿಕಾಸ್ ಗುರು ನಾಯಕತ್ವದ ಸೂಪರ್ ಜಾಯಿಂಟ್ಸ್, ಪ್ರಸನ್ನ ಮಾಲಿಕತ್ವದ ಚಂದನ್ ನಾಯಕತ್ವದ ರಾಯಲ್ಸ್, ಪ್ರಕಾಶ್ ಮಾಲೀಕತ್ವದ ಸುದೀಪ್ ನಾಯಕತ್ವದ ಸೂಪರ್ ಕಿಂಗ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನದ ಎಲ್ಲ ಆಟಗಾರರಿಗೆ ನೆನಪಿನ ಕಾಣಿಕೆ ಹಾಗೂ ಇತರ ತಂಡದ ಆಟಗಾರರಿಗೆ ಮೆಡಲ್ ವಿತರಿಸಲಾಯಿತು.