ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ಉಷಾ ನರಸಿಂಹನ್ ಚಾಲನೆ ನೀಡಿದರು. ಪ್ರೊ.ಎನ್.ಭಾರತಿ, ಎಸ್.ಪಿ.ಶೋಭಾ, ಜಿ.ಜ್ಯೋತಿಲಕ್ಷ್ಮೀ, ಕೆ.ಎಸ್.ಸುಕೃತ, ಸಂಜನಾ, ವೈಷ್ಣವಿ ಇತರರಿದ್ದರು. 
ಮೈಸೂರು

ಒಗ್ಗಟ್ಟಿನ ಯುವಧ್ವನಿಯಾಗಿ ರೂಪುಗೊಳ್ಳಿ: ಲೇಖಕಿ ಉಷಾ ನರಸಿಂಹನ್ ಸಲಹೆ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿ ಸಮೂಹ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ
  • ನಮ್ಮ ಸಂಸ್ಕೃತಿ, ಪರಂಪರೆಯನ್ನು ಗೌರವಿಸುವ ಧ್ವನಿಯಾಗಬೇಕು

ಮೈಸೂರು:

ವೈಯಕ್ತಿಕ ಹಿತಾಸಕ್ತಿಗಿಂತ ಸಂಘಟನಾತ್ಮಕ ಶಕ್ತಿಗೆ ಹೆಚ್ಚು ಬಲ, ಬೆಲೆಯಿದೆ. ಹಾಗಾಗಿ ವಿದ್ಯಾರ್ಥಿಗಳು ಒಗ್ಗಟ್ಟಿನ ಯುವಧ್ವನಿಯಾಗಿ ರೂಪುಗೊಳ್ಳಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಮೈಸೂರು ವಿಭಾಗದ ಅಧ್ಯಕ್ಷೆ, ಕಾದಂಬರಿಕಾರ್ತಿ ಉಷಾ ನರಸಿಂಹನ್ ಸಲಹೆ ನೀಡಿದರು.

ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‌ಡಿಎಂ ಮಹಿಳಾ ಮಹಾವಿದ್ಯಾಲಯದ ಆಯೋಜಿಸಿದ್ದ 2026-2027ನೇ ಸಾಲಿನ ವಿದ್ಯಾರ್ಥಿನಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಂಸ್ಥಿಕ ಮತ್ತು ಸಂಘಟನೆಯ ರೂಪವೇ ವಿದ್ಯಾರ್ಥಿ ಸಂಘ. ಆದ್ದರಿಂದ ವಿದ್ಯಾರ್ಥಿ ಸಮೂಹ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕಿದೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಗೌರವಿಸುವ ಧ್ವನಿಯಾಗಬೇಕು, ಪದವಿ ಪಡೆಯುವ ಜತೆಗೆ ಶಿಸ್ತು, ಸಂಯಮ, ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿ ಸಂಘದ ಮೂಲಕ ಉತ್ತಮ ಕಾರ್ಯಕ್ರಮ ಮಾಡಿ, ಸಮಸ್ಯೆಗಳನ್ನು ಎದುರಿಸುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಎಂಎಂಕೆ ಮತ್ತು ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಸ್.ಪಿ.ಶೋಭಾ ಮಾತನಾಡಿ, ವಿದ್ಯಾರ್ಥಿಗಳು ಶುದ್ಧ ಸ್ವಾತಿ ಮುತ್ತುಗಳಾಗಬೇಕು. ನೀರು ಯಾವ ಪಾತ್ರೆಗೆ ಹಾಕಿದರೆ ಅದೇ ಆಕಾರ ಪಡೆಯುತ್ತದೆಯೋ ಹಾಗೆ ಹೊಂದಾಣಿಕೆ ಗುಣವನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.
ನಿಮ್ಮ ಬದುಕನ್ನು ನೀವೇ ಕಟ್ಟಿಕೊಳ್ಳಬೇಕು ಎಂಬ ಸ್ವಾಮಿ ವಿವೇಕನಂದರ ಮಾತಿನಂತೆ ಪ್ರಯತ್ನ, ಪರಿಶ್ರಮದಿಂದ ಬದುಕು ರೂಪಿಸಿಕೊಳ್ಳಬೇಕು. ಮೊದಲು ನಿಮ್ಮನ್ನು ನೀವು ನಂಬಿ ಮುನ್ನಡೆದರೆ ಸಾಧನೆಗೆ ದಾರಿಯಾಗುತ್ತದೆ ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ ಮಾತನಾಡಿ, ಇದು ಕೇವಲ ಉದ್ಘಾಟನೆ ಮಾಡುವ ಮತ್ತು ಅದನ್ನು ಮುಗಿಸುವ ಸಮಾರಂಭವಲ್ಲ. ಇದು ಹೊಸ ನಾಯಕರ ಸೇವೆಯ ಪ್ರಯಾಣದ ಆರಂಭವಾಗಿದೆ. ನಿಮ್ಮ ಜವಾಬ್ದಾರಿಗಳು ಮತ್ತು ಟೀಮ್ ವರ್ಕ್ ಮುಖ್ಯವಾಗಿದೆ ಎಂದರು.
ವಿದ್ಯಾರ್ಥಿ ಸಂಘದ ಹೊಸ ಪ್ರತಿನಿಧಿಗಳಿಗೆ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಜಿ.ಜ್ಯೋತಿಲಕ್ಷ್ಮೀ, ಪದಗ್ರಹಣ ಹಾಗೂ ಪ್ರತಿಜ್ಞಾವಿಧಿ ಬೋಧಿಸಿದರು
ಐಕ್ಯೂಎಸಿ ಸಂಚಾಲಕರಾದ ಕೆ.ಎಸ್.ಸುಕೃತ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಂಜನಾ, ಕಾರ್ಯದರ್ಶಿ ವೈಷ್ಣವಿ, ತರಗತಿ ಪ್ರತಿನಿಧಿಗಳು, ವಿದ್ಯಾರ್ಥಿ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳು, ಅಧ್ಯಾಪಕರು, ಅಧ್ಯಾಪಕೇತರರು ಇದ್ದರು.