ಶಾಸಕ ದರ್ಶನ್ ಧ್ರುವನಾರಾಯಣ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದರು. 
ಮೈಸೂರು

ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಿ

ಲೋಕೇಶ್ ಮನು. ಡಿ
ನಂಜನಗೂಡು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತು ಕರ್ತವ್ಯ ಹಿರ್ವಹಿಸಿದರೆ ತಾಲೂಕು ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ಗ್ರಾಪಂ ಪಿಡಿಒಗಳ ಸಭೆಯಲ್ಲಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕಾರ್ಯ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕ ಸರಬರಾಜು, ಚರಂಡಿ ನಿರ್ವಹಣೆ, ವಿದ್ಯುತ್ ಸಮಸ್ಯೆ ಸೇರಿದಂತೆ ಇತರ ಸಮಸ್ಯೆಗಳನ್ನು ಬಗೆಹರಿಸಿದರೆ ನನ್ನಗೇಕೆ ನಿತ್ಯ ಹತ್ತಾರು ದೂರುಗಳ ಕರೆಗಳು ಬರುತ್ತವೆ ಎಂದು ಪ್ರಶ್ನಿಸಿದರು. ಮುಂಗಾರು ಕೈಕೊಟ್ಟಿದೆ, ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಸರಬರಾಜು ಅಗುತ್ತಿಲ್ಲ. ತಾಲೂಕಿನಲ್ಲಿ ಬೇಸಿಗೆ ಸಮಯದಲ್ಲಿ ಹಲವು ಬೋರ್‌ವೆಲ್‌ಗಳನ್ನು ಕೊರೆಸಲಾಗಿತ್ತು. ಇವತ್ತಿನವರೆಗೂ ಆ ಬೋರ್‌ವೆಲ್‌ಗಳು ಸಾರ್ವಜನಿಕರ ಉಪಯೋ
ಗಕ್ಕೆ ಬರುತ್ತಿಲ್ಲ. ಕೆಲವಕ್ಕೆ ವಿದ್ಯುತ್ ಸಂಪರ್ಕ ಇಲ್ಲ, ಹಲವು ಬೋರ್‌ವೆಲ್‌ಗಳು ತಾತ್ಕಾಲಿಕ ತೊಂದರೆಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿದು ಹೋಗುತ್ತಿಲ್ಲ. ಮನೆ ಮುಂದಿನ ಕಸ ಸರಿಯಾಗಿ ವಿಲೇವಾರಿಯಾಗುತ್ತಿಲ್ಲ. ಬೀದಿಗಳಲ್ಲಿ ಸರಿಯಾಗಿ ದೀಪಗಳು ಉರಿಯುತ್ತಿಲ್ಲ ಎಂದು ಗ್ರಾಮಸ್ಥರು ನಮ್ಮನ್ನು ಕೇಳಿದಾಗ ನಾವು ಗ್ರಾಮಸ್ಥರಿಗೆ ಏನೆಂದು ಉತ್ತರ ನೀಡಬೇಕು ನೀವೇ ಹೇಳಿ? ಎಂದು ತರಾಟೆಗೆ ತೆಗೆದುಕೊಂಡರು.
ನಿಮ್ಮ ಕೈಯಲ್ಲಿ ಕೆಲಸ ಮಾಡಲು ಆದರೆ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸಿ. ಇಲ್ಲದಿದ್ದರೆ ನೇರವಾಗಿ ನಿಮ್ಮ ಮನವಿಯನ್ನು ನಮಗೆ ತಿಳಿಸಿ. ನಾವು ಅದಕ್ಕೆ ಪರಿಹಾರ ಹುಡುಕುತ್ತೇವೆ. ಅನುದಾನದ ಕೊರತೆ ಇದ್ದರೆ ನಿಮ್ಮ ಮೇಲಧಿಕಾರಿಗಳಿಗೆ ತಿಳಿಸಬೇಕು. ಏನು ಮಾಡದೆ ಸುಮ್ಮನೆ ಕುಳಿತರೆ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಅಧಿಕಾರಿಗಳು ತಮ್ಮ ಕೆಲಸ ಮಾಡದಿದ್ದರೆ ಜನರು ಕೇಳುವ ಪ್ರಶ್ನೆಗಳಿಗೆ ನಾವು ಉತ್ತರಿಸಲು ಸಾಧ್ಯವಾಗುವುದಿಲ್ಲ. ಎಲ್ಲ ಕೆಲಸಗಳನ್ನು ನಾವೇ ಮಾಡುವುದಾದರೆ ನಿಮಗೆ ಏನು ಕೆಲಸ? ಎಂದು ಕಿಡಿಕಾರಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ರಾಜೇಶ್ ಜೆರಾಲ್ಡ್, ತಾಲೂಕಿನ 48 ಗ್ರಾಪಂ ಪಿಡಿಒಗಳು ಹಾಜರಿದ್ದರು.