ಶಾರದ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್, ಸ್ವರಾಂಜಲಿ ತಂಡದೊಂದಿಗೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮಧುರ ಮಿಲನ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರನ್ನು ಸನ್ಮಾನಿಸಲಾಯಿತು. ಡಾ.ಶ್ರೀನಾಥ್, ಪ್ರೊ.ಎಂ.ಕೃಷ್ಣೇಗೌಡ, ಡಾ.ಎಚ್.ಎನ್.ದಿನೇಶ್, ಡಾ.ಲಾವಣ್ಯ ಶೆಣೈ, ಕೆ.ಶಂಕರ್, ದಿವ್ಯ ಕೇಶವನ್, ಇಂದು ಮತಿ ಜೈಪಾಲ್, ಡಾ.ಎಂ.ಎನ್.ರಘುವೀರ್ ಇದ್ದರು. 
ಮೈಸೂರು

ಜೀವನದ ಪ್ರತಿ ಕ್ಷಣದಲ್ಲಿಯೂ ಸಂತೋಷವಾಗಿರಲಿ: ಹಿರಿಯ ನಟ ಡಾ.ಶ್ರೀನಾಥ್

ಪ್ರಮುಖ ಮುಖ್ಯಾಂಶಗಳು

  • ಸಂತೋಷವಾಗಿ ನಡೆದರೆ ಮಾತ್ರ ಜೀವನ ಸುಂದರ
  • ನಮ್ಮ ಆಯ್ಕೆ ಜೀವನದ ಗತಿಯನ್ನೇ ಬದಲಿಸಬಲ್ಲದು
ಮೈಸೂರುಜೀವನ ಈ ಕ್ಷಣ ನನ್ನದು ಎಂದು ಪ್ರತಿ ಕ್ಷಣವೂ ತಿಳಿದು ಸಂತೋಷವಾಗಿ ನಡೆದರೆ ಮಾತ್ರ ಜೀವನ ಸುಂದರವಾಗಿರಲಿದೆ ಎಂದು ಹಿರಿಯ ನಟ ಡಾ.ಶ್ರೀನಾಥ್ ಅಭಿಪ್ರಾಯಪಟ್ಟರು.
ಶಾರದ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್,  ಸ್ವರಾಂಜಲಿ ತಂಡದೊಂದಿಗೆ ನಗರದ ಜೆ.ಕೆ.ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಆಯೋಜಿಸಿದ್ದ ಮಧುರ ಮಿಲನ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ವೃದ್ಧಾಪ್ಯ ಮನುಷ್ಯನಿಗೆ ಪರಿಪಕ್ವತೆ ನೀಡಲಿದೆ. ಹಾಗಾಗಿ ಜೀವನ ಈ ಕ್ಷಣ ನನ್ನದು ಎಂದು ಪ್ರತಿ ಕ್ಷಣದಲ್ಲಿಯೂ ಸಂತೋಷವಾಗಿರಬೇಕು. ಆಗ ಮಾತ್ರ ಜೀವನ ಸುಂದರವಾಗಿರಲಿದೆ ಎಂದು ಹೇಳಿದರು.
ಜೀವನದಲ್ಲಿ ನಮ್ಮ ಆಯ್ಕೆ ಮುಖ್ಯವಾಗಿರಬೇಕು, ಅದು ಜೀವನದ ಗತಿಯನ್ನೇ ಬದಲಿಸಬಲ್ಲದು, ನನ್ನ ಆಯ್ಕೆ ಕೂಡ ನನ್ನ ಜೀವನದ ಧಿಕ್ಕನ್ನೇ ಬದಲಿಸಿತು. ಪತ್ನಿಯಾಗಿ ನಾನು ಗೀತಾ ಅವರನ್ನು ಆಯ್ಕೆ ಮಾಡಿದ್ದರಿಂದ ನಟನಾ ಕ್ಷೇತ್ರದಲ್ಲಿ ನನ್ನ ಬದುಕೇ ಬದಲಾಯಿತು ಎಂದು ಹೇಳಿದರು.
ಹಿರಿಯ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ಹಿರಿಯ ನಾಗರೀಕರು ಯಾವುದೇ ಒತ್ತಡ, ಆತಂಕಕ್ಕೀಡಾಗದೇ ವೃದ್ದಾಪ್ಯದಲ್ಲಿ ಸಂತೋಷದಿಂದ ಇರಬೇಕು ಎಂದು ತಿಳಿಸಿದರು.
ಸಾಕಷ್ಟು ಮಂದಿ ವಯೋವೃದ್ದರು ನಾನು ಮೊದಲು ಹೇಗಿದ್ದೆ. ಈಗ ಹೇಗಾದೆ ಎಂದು ಸದಾ ಕೊರಗುತ್ತಿರುತ್ತಾರೆ. ಅಲ್ಲದೇ ನನ್ನ ಮಾತು ಯಾರೂ ಕೇಳುವುದಿಲ್ಲ ಎಂದು ಗೊಂದಲದಲ್ಲಿ ಇರುತ್ತಾರೆ. ಆದರೆ ಇಂತಹ ಯಾವುದೇ ಒತ್ತಡಕ್ಕೂ ಸಿಲುಕದೆ ಜೀವನವನ್ನು ಸಹಜವಾಗಿ ಸ್ವೀಕರಿಸುವ ಮೂಲಕ ಸಂತೃಪ್ತ ಜೀವನ ನಡೆಸಬಹುದು ಎಂದು ಎಂದರು.
ಆಯೋಜಕರಾದ ಡಾ.ಎಚ್.ಎನ್.ದಿನೇಶ್, ಡಾ.ಲಾವಣ್ಯ ಶೆಣೈ, ಕೆ.ಶಂಕರ್, ದಿವ್ಯ ಕೇಶವನ್, ಇಂದು ಮತಿ ಜೈಪಾಲ್, ಡಾ.ಎಂ.ಎನ್.ರಘುವೀರ್ ಇದ್ದರು. ಕಾರ್ಯಕ್ರಮದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವ ಹಿರಿಯ ನಾಗರೀಕರನ್ನು ಸನ್ಮಾನಿಸುವುದರೊಂದಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರೀಕರಿಗೆ ಬಹುಮಾನ ನೀಡಲಾಯಿತು. ಬಳಿಕ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.