ಬೆಟ್ಟದಪುರ ಸಮೀಪದ ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಡಿಜಿಕೊಪ್ಪಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಡೆಂಘೆ ವಿರೋಧಿ ಮಸಾಚಾರಣೆ ನಡೆಯಿತು. ಸಮುದಾಯ ಆರೋಗ್ಯ ಅಧಿಕಾರಿ ಅನಿಲ್, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಆಶಾ ಕಾರ್ಯಕರ್ತೆ ಹೇಮಾ ಗ್ರಾಮಸ್ಥರು ಇದ್ದರು.
- ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ ಸಲಹೆ
- ಅರಿವು ಕಾರ್ಯಕ್ರಮ
ಬೆಟ್ಟದಪುರ: ಡೆಂಘೆ ಜ್ವರದ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಡಿಜಿ ಕೊಪ್ಪಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಅಯೋಜಿಸಿದ್ದ ರಾಷ್ಟ್ರೀಯ ಡೆಂಘೆ ವಿರೋಧಿ ಮಾಸಾಚರಣೆಯಲ್ಲಿ ಅವರು ಮಾತನಾಡಿದರು.
ಸೊಳ್ಳೆಗಳು ಸಾಮಾನ್ಯವಾಗಿ ನಿಂತ ನೀರಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೋಂಕಿತ ಸೊಳ್ಳೆಯು ಆರೋಗ್ಯವಂತ ವ್ಯಕ್ತಿಗೆ ಕಚ್ಚಿದಾಗ ಡೆಂಘೆ, ಚಿಕನ್‌ಗುನ್ಯಾ ರೋಗಗಳು ಹರಡುತ್ತವೆ. ಈ ರೋಗದ ಲಕ್ಷಣವೆಂದರೆ ವಿಪರೀತ ಜ್ವರ, ಮೈ ಕೈ ನೋವು, ತಲೆನೋವು, ಕಣ್ಣುಗುಡ್ಡೆಗಳ ಹಿಂಭಾಗ ನೋವು, ಮೈಮೇಲೆ ಗುಳ್ಳೆಗಳಾಗುತ್ತದೆ. ಇದಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗದ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಯಾವುದೇ ನೀರಾದರೂ ಅದನ್ನು ಸುರಕ್ಷಿತವಾಗಿ ಮುಚ್ಚಿಡಬೇಕು. ವಾರಕ್ಕೆ ಎರಡು ಬಾರಿ ಎಲ್ಲ ನೀರು ಸಂಗ್ರಹಗಳನ್ನು ತೊಳೆದು ಉಜ್ಜಿ ಒಣಗಿಸಿ ನೀರು ತುಂಬಿಸಿ ಮುಚ್ಚಿಡಬೇಕು ಹಾಗೂ ಘನತ್ಯಾಜ್ಯ ವಸ್ತುಗಳಾದ ಒಡೆದ ಬಾಟಲಿ, ತೆಂಗಿನ ಚಿಪ್ಪು, ಟಯರ್‌ಗಳು ಇತ್ಯಾದಿ ನೀರು ಸಂಗ್ರಹಗಳನ್ನು ತೆರವುಗೊಳಿಸಬೇಕು. ಮನೆಯಲ್ಲಿ ಸ್ವಯಂ ರಕ್ಷಣಾ ವಿಧಾನಗಳಾದ ಮೈ ತುಂಬಾ ಬಟ್ಟೆ ಧರಿಸುವುದು, ಸೊಳ್ಳೆ ನಿವಾರಕ ಲಿಕ್ವಿಡ್ ಬಳಸುವುದು, ಕಿಟಕಿ ಬಾಗಿಲುಗಳನ್ನು ಮುಚ್ಚಬೇಕು ಎಂದು ತಿಳಿಸಿದರು.
ಸಮುದಾಯ ಆರೋಗ್ಯ ಅಧಿಕಾರಿ ಅನಿಲ್, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಆಶಾ ಕಾರ್ಯಕರ್ತೆ ಹೇಮಾ ಗ್ರಾಮಸ್ಥರು ಇದ್ದರು.