ಹುಣಸೂರು ತಾಲೂಕು ಬಿಳಿಗೆರೆ ಗ್ರಾ.ಪಂ.ಕೇಂದ್ರದಲ್ಲಿ ವಿಶ್ವ ಕ್ಷಯದಿನಾಚರಣೆಯನ್ನು ಆಚರಿಸಲಾಯಿತು. ಎಇಇ ಯತೀಶ್, ಪಿಡಿಒ ಶೀಲಾ, ಹನುಮಂತು, ಇಂದಿರಾ, ಶ್ವೇತಾ ಇತರರಿದ್ದರು.
- ಹಿರಿಯ ಆರೋಗ್ಯ ನಿರೀಕ್ಷಕ ಹನುಮಂತು ಹೇಳಿಕೆ
ಹುಣಸೂರು: ತಾಲೂಕಿನ ಗಾವಡಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬಿಳಿಗೆರೆ ಗ್ರಾ.ಪಂ.ಕೇಂದ್ರದಲ್ಲಿ ಗುರುವಾರ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಹನುಮಂತು ಮಾತನಾಡಿ, ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯದಿಂದ ಕ್ಷಯರೋಗ ಕಾಯಿಲೆ ಬರುತ್ತದೆ. ಕಫದೊಂದಿಗೆ ಕೆಮ್ಮು, ಕಫದಲ್ಲಿ ರಕ್ತ ಕಾಣಿಸುವುದು, ಸತತ ಜ್ವರ, ಎದೆನೋವು, ದೇಹದ ಕೆಲಭಾಗಗಳಲ್ಲಿ ಗಂಟು ಕಾಣಿಸಿಕೊಳ್ಳುವುದು, ರಾತ್ರಿ ಹೊತ್ತು ಬೆವರುವಿಕೆ ಇವೇ ಮುಂತಾದವು ಕ್ಷಯರೋಗದ ಲಕ್ಷಣಗಳಾಗಿವೆ. ಕ್ಷಯರೋಗ ಸಾಂಕ್ರಾಮಿಕ ರೋಗವಾಗಿದ್ದು, ರೋಗಬಾಧಿತರು ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಕೆಮ್ಮವುದು ಮುಂತಾದವುಗಳನ್ನು ಮಾಡುವುದು ನಿಷಿದ್ಧ. ಕಫ ಪರೀಕ್ಷೆಯ ಮೂಲಕ ಕಾಯಿಲೆಯನ್ನು ಗುರುತಿಸಬಹುದಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧೋಪಚಾರ ಲಭ್ಯವಿದೆ. ಬಿಳಿಗೆರೆ ಗ್ರಾ.ಪಂ.ಯನ್ನು ಕ್ಷಯಮುಕ್ತ ಗ್ರಾ.ಪಂ.ಯನ್ನಾಗಿಸುವ ಗುರಿ ಹೊಂದಿದ್ದು ಗ್ರಾಮೀಣರು ಸಹಕರಿಸಬೇಕೆಂದು ಕೋರಿದರು.
ಲೋಕೋಪಯೋಗಿ ಇಲಾಖೆ ಎಇಇ ಯತೀಶ್, ಪಿಡಿಒ ಶೀಲಾ, ಕಾರ್ಯದರ್ಶಿ ಆನಂದ್, ಆರೋಗ್ಯ ಇಲಾಖೆಯ ಸಿಬ್ಬಂದಿ ರಾಣಿ, ಇಂದಿರಾ, ಶ್ವೇತಾ, ಆಶಾ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.