ಬೆಟ್ಟದಪುರ ಸಮೀಪದ ನಂದೀಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಪುನರ್ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು.
- ಮಾದಪಟ್ಟಣ ವಿರಕ್ತ ಮಠದ ಶ್ರೀ ತೋಂಟದಾರ್ಯ ಸ್ವಾಮೀಜಿ ಭಾಗಿ
ಬೆಟ್ಟದಪುರ: ದೇವಸ್ಥಾನಗಳು ಕೇವಲ ಕಲ್ಲು-ಮಣ್ಣಿನ ಕಟ್ಟಡಗಳಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ನೈತಿಕತೆಯ ಕೇಂದ್ರಗಳಾಗಿದ್ದು, ಬಸವಣ್ಣನವರ ತತ್ವದಂತೆ ಕಾಯಕವೇ ಕೈಲಾಸವೆಂದು ನಂಬಿ ಗ್ರಾಮಸ್ಥರೆಲ್ಲರೂ ಒಂದಾಗಿ ಈ ಜೀರ್ಣೋದ್ಧಾರ ಮಾಡಿರುವುದು ಹೆಮ್ಮೆಯ ವಿಚಾರ ಎಂದು ಮಾದಪಟ್ಟಣ ವಿರಕ್ತ ಮಠದ ಶ್ರೀ ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಬೆಟ್ಟದಪುರ ಸಮೀಪದ ನಂದೀಪುರ ಗ್ರಾಮದಲ್ಲಿ ಇತ್ತಿಚೆಗೆ ಆಯೋಜಿಸಿದ್ದ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ದಾರ ಪುನರ್ ಪ್ರತಿಷ್ಠಾಪನೆ, ವಿಮಾನಗೋಪುರ ಕಲಶಾರೋಹಣ ಮತ್ತು ಗ್ರಾಮಾಯಾ ಅಂಕಸ್ಥಾಪನೆ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀರ್ಣೋದ್ಧಾರ ಎಂದರೆ ಹಳೆಯದನ್ನು ಹೊಸತು ಮಾಡುವುದಷ್ಟೇ ಅಲ್ಲ, ನಮ್ಮೊಳಗಿನ ಆಧ್ಯಾತ್ಮಿಕ ಶಕ್ತಿಯನ್ನು ಜಾಗೃತಗೊಳಿಸುವುದು. ಭಕ್ತರೆಲ್ಲರೂ ಸೇರಿ ಮಾಡಿದ ಈ ಕೈಂಕರ್ಯ ಶ್ಲಾಘನೀಯ ಎಂದರು.
ಆಶ್ರಯ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ನಮ್ಮ ಪೂರ್ವಜರು ಕಟ್ಟಿದ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯ. ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಕೈಜೋಡಿಸಿದ ಪ್ರತಿಯೊಬ್ಬ ದಾನಿಗಳ ಹಾಗೂ ಶ್ರಮಜೀವಿಗಳ ಸೇವೆ ಅಮೂಲ್ಯವಾಗಿದೆ ಎಂದು ಹಾರೈಸಿದರು.
ದೇವಸ್ಥಾನದ ಗೋಪುರ ಹಾಗೂ ಗರ್ಭಗುಡಿಯನ್ನು ನಾನಾ ತರಹದ ಪುಷ್ಪಗಳಿಂದ ಮತ್ತು ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಾಲಯಕ್ಕೆ ಆಗಮಿಸಿದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಪೇಂಟ್ ಆ್ಯಂಡ್ ವಾರ್ನಿಸ್ ಅಧ್ಯಕ್ಷ ಎಚ್.ಡಿ.ಗಣೇಶ್, ಮುಖಂಡರಾದ ವಿಶ್ವನಾಥ್, ತನುರಾಜೇ ಅರಸ್, ಹನುಮಂತರಾಜು, ಎನ್.ಸಿ.ಕರುಣಾನಿಧಿ, ರುದ್ರ ಆರಾಧ್ಯ, ಬಸವರಾಜು, ಶಿಲ್ಪಾ ಸತೀಶ್, ಬಂಗಾರಿಗೌಡ್ರು, ನಂದೀಶ್, ನಾಗರಾಜು, ದೊಡ್ಡೇಗೌಡ, ಚಂದ್ರಶೇಖರ್, ರವಿ, ಲೋಕೇಶ್, ಜಗದೀಶ್ ಆರಾಧ್ಯ, ಮಲ್ಲೇಶಚಾರಿ ಎನ್.ಎಸ್.ಜಯಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು.