ಸರಗೂರು ತಾಲೂಕಿನ ತೆಲುಗು ಮಸಹಳ್ಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಕೊಂಡ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಸರಗೂರು: ತಾಲೂಕಿನ ತೆಲುಗು ಮಸಹಳ್ಳಿ ಗ್ರಾಮದ ಪ್ರಸಿದ್ಧ ಬಸವೇಶ್ವರ ಸ್ವಾಮಿ ಕೊಂಡೋತ್ಸವ ಮಂಗಳವಾರ ಬೆಳಗ್ಗೆ ನೆರವೇರಿತು.
ಕೊಂಡೋತ್ಸವದ ಅಂಗವಾಗಿ ಶನಿವಾರದಿಂದ ದೇವತಾ ಕಾರ್ಯಗಳು ಆರಂಭವಾಗಿದ್ದವು. ಶನಿವಾರ ರಾತ್ರಿ ಕೊಂಡದ ಹೊಂಡ ತೆಗೆಯುವುದು, ಭಾನುವಾರ ಮಧ್ಯಾಹ್ನ ಕೊಂಡಬಂಡಿ ಹಾಗೂ ಕೊಂಡಕ್ಕೆ ಸೌದೆ ಹಾಕುವ ಕಾರ್ಯಕ್ರಮ, ಸೋಮವಾರ ರಾತ್ರಿ ಉತ್ಸವ ಹಾಗೂ ಅನ್ನಸಂತರ್ಪಣೆ, ರಾತ್ರಿ ಸುಗಮ ಸಂಗೀತ, ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆದವು.
ಮಂಗಳವಾರ ಬೆಳಗ್ಗೆ 6 ಗಂಟೆಗೆ ಬಸವೇಶ್ವರ ಮೂರ್ತಿಗೆ ಧಾರ್ಮಿಕ ಕಾರ್ಯ ಹೋಮ, ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕ ಬಸವೇಶ್ವರ ಸ್ವಾಮಿಯ ಮೂರ್ತಿಯನ್ನು ಹೊತ್ತು ಅಗ್ನಿಕೊಂಡ ಪ್ರವೇಶ ಮಾಡಿದರು. ನಂತರ ದೇವರಿಗೆ ಭಕ್ತರಿಂದ ಪೂಜೆ ನೆರವೇರಿತು.
ಗ್ರಾಮಸ್ಥರು ಕೊಂಡದ ಸೌದೆ, ನೀರಗಾಲಿ, ತಮಟೆ ವಾದ್ಯ, ಬಾಣ ಬಿರುಸು, ಸಿಡಿಮದ್ದಿನ ಸಮೇತ ಮೆರವಣಿಗೆಯಲ್ಲಿ ಕರಗ ಕರೆ ತಂದರು. ಗ್ರಾಮದಲ್ಲಿ ಪ್ರಮುಖ ರಸ್ತೆಗಳಲ್ಲಿ ಗ್ರಾಮ ದೇವತೆಗಳಾದ ಶ್ರೀ ಬಸವೇಶ್ವಸ್ವಾಮಿ ಜತೆ ಶ್ರೀ ಮಾರಮ್ಮ ಹಾಗೂ ಮಹದೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿ ದೇವಸ್ಥಾನವನ್ನು ತಲುಪಿ ನಂತರ ಕೊಂಡೋತ್ಸವ ನಡೆಯಿತು. ಜಾತ್ರಾ ಮಹೋತ್ಸವ ಅಂಗವಾಗಿ ಬಸವೇಶ್ವರ ಮೂರ್ತಿಗೆ ವಿವಿಧ ಬಗೆಯ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ದೇವರ ಗುಡಿಯನ್ನು ಹಸಿರು ತೋರಣದಿಂದ ಸಿಂಗರಿಸಲಾಗಿತ್ತು.