ಹುಣಸೂರು ತಾಲೂಕು ಮಾದಳ್ಳಿ ಉಕ್ಕಿನಕಂತೆ ಮಠದಲ್ಲಿ ಆಯೋಜಿಸಿದ್ದ ಬಸವಜಯಂತಿ ಸಮಾರಂಭವನ್ನು ರಾಜ್ಯದಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸುತ್ತೂರು ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಶಾಸಕ ಜಿ.ಡಿ.ಹರೀಶ್‌ಗೌಡ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಶ್ರೀಸಾಂಬಸದಾಶಿವ ಸ್ವಾಮೀಜಿ, ಶ್ರೀ ನಟರಾಜ ಸ್ವಾಮೀಜಿ ಇದ್ದರು. 
ಮೈಸೂರು

ಮಾನವೀಯತೆ ಸಮಾಜವೇ ಬಸವೇಶ್ವರರ ಆಶಯ

ಹುಣಸೂರು : ಮಾನವೀಯತೆಯ ಮೌಲ್ಯ ಹೊಂದಿದ ಸಮಾಜ ನಿರ್ಮಾಣವೇ ಜಗಜ್ಯೋತಿ ಬಸವೇಶ್ವರರ ಆಶಯವಾಗಿತ್ತು ಎಂದು ಮುಖ್ಯಮಂತ್ತಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಮಾದಳ್ಳಿ ಶ್ರೀ ಉಕ್ಕಿನಕಂತೆ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮತ್ತು ಬಸವ ಸಮಿತಿ ವತಿಯಿಂದ ಸೋಮವಾರ ಬಸವ ಮಹಾದ್ವಾರವನ್ನು ಉದ್ಘಾಟಿಸಿ ನಂತರ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಸವಣ್ಣ ಒಬ್ಬ ಸಮಾಜ ಸುಧಾರಕ, ಜಾತಿಯ ಸಂಕೋಲೆ, ಅಸಮಾನತೆ ಮತ್ತು ಮೌಢ್ಯಗಳನ್ನು ಹೋಗಲಾಡಿಸಲು ದುಡಿದರು. ಮೇಲ್ಜಾತಿಯಲ್ಲಿ ಹುಟ್ಟಿದರೂ ತಾನು ಅಸ್ಪ್ರಶ್ಯನೆಂದೇ ಗುರುತಿಸಿಕೊಂಡವರು. 12ನೇ ಶತಮಾನದಲ್ಲಿ ಬಸವಣ್ಣ ಆರಂಭಿಸಿದ ಚಳವಳಿ, ಹೋರಾಟ ಅಲ್ಪ ಪ್ರಮಾಣದ ಪರಿಣಾಮ ಬೀರಿದರೂ ಪೂರ್ಣ ಫಲ ಸಿಗಲಿಲ್ಲ. ಮನುಷ್ಯ ಸಮಾಜ ನಿರ್ಮಾಣದಿಂದ ಮಾತ್ರ ಸಮಾಜದಲ್ಲಿ ಶಾಂತಿ ನೆಲಸಲು ಸಾಧ್ಯ ಎಂದು ನಂಬಿದ್ದರು ಎಂದರು.
ಬಸವಣ್ಣರ ಮಾನವತಾವಾದ ಸಿದ್ಧಾಂತವೇ ಅವರನ್ನು ರಾಜ್ಯ ಸರ್ಕಾರ ಸಾಂಸ್ಕೃತಿಕ ನಾಯಕನೆಂದು ಘೋಷಿಸಲು ಕಾರಣವಾಯಿತು. ಬಸವಣ್ಣ ತಿಳಿಸಿದ ನೀತಿಗಳೇ ನಮ್ಮ ಸಂವಿಧಾನದ ನಾಲ್ಕು ಕಂಬಗಳಾದವು. ಸ್ವಾತಂತ್ರ್ಯ, ಮಾನವೀಯತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯ ನಮ್ಮ ಆದರ್ಶಗಳಾದವು. ಬಸವಣ್ಣರ ತತ್ವಾದರ್ಶ ಹಿಂದೆಯೂ ಪ್ರಸ್ತುತವಾಗಿತ್ತು. ಇಂದಿಗೂ ಇದೆ, ಮುಂದೆಯೂ ಇರುತ್ತದೆ. ಜಾತಿ, ಧರ್ಮ, ಮೌಢ್ಯದಿಂದ ಹೊರಬಂದು ಜಾಗೃತ ಸಮಾಜ ನಿರ್ಮಾಣದ ಸಂದೇಶ ನೀಡುವ ಮೂಲಕ ಬಸವಣ್ಣ ವಿಶ್ವ ಗುರುವಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ತಾಲೂಕಿನ ಕೆಲ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನಾನು ಸಿಎಂ ಅವರಲ್ಲಿ ಮನವಿ ಮಾಡುತ್ತೇನೆ. ಮುಖ್ಯವಾಗಿ ತಾಲೂಕಿನ ಆಸ್ಪತ್ರೆ ಕಾವಲ್ ಮತ್ತು ಉದ್ದೂರು ಕಾವಲ್ ಗ್ರಾ.ಪಂ. ವ್ಯಾಪ್ತಿಯ ರೈತರಿಗೆ ಸಾಗುವಳಿ ಪತ್ರ ಮಂಜೂರು ಮಾಡಿಕೊಡಬೇಕು. ಲಕ್ಷ್ಮಣತೀರ್ಥ ನದಿ ಶುದ್ಧೀಕರಣಕ್ಕೆ ಅನುದಾನ ಮಂಜೂರು ಮಾಡಬೇಕು. ಹುಣಸೂರು ಉಪವಿಭಾಗ ವ್ಯಾಪ್ತಿಯ 6 ತಾಲೂಕುಗಳನ್ನು ಒಳಗೊಂಡು ಹುಣಸೂರು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು. ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಹೈಟೆಕ್ ಆಸ್ಪತ್ರೆಗೆ ಹೆಚ್ಚುವರಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳ್ಳಲು ಸಹಕಾರ ನೀಡಬೇಕು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಗ್ರಾಮಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮ ವಹಿಸಬೇಕು. ತಾಲೂಕಿನಲ್ಲಿ ಬುದ್ಧವಿಹಾರ ಕೇಂದ್ರ ಸ್ಥಾಪನೆ, ತಾಲೂಕಿನಲ್ಲಿ ಇಂಜಿನಿಯರಿಂಗ್ ಕೋರ್ಸ್ ಸ್ಥಾಪನೆ, ಅರಸು ಕಲಾಭವನದ ಹೆಚ್ಚುವರಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಕೊಡಬೇಕು ಎಂದು ಕೋರಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾವಡಗೆರೆ ಶ್ರೀ ಗುರುಲಿಂಗ ಜಂಗಮದೇವರ ಮಠದ ಶ್ರೀ ನಟರಾಜ ಸ್ವಾಮೀಜಿ, ಮಾದಳ್ಳಿಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ, ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ಡಾ.ವೃಷಬೇಂದ್ರಪ್ಪ, ಬಸವ ಸಮಿತಿ ಅಧ್ಯಕ್ಷ ಪುಟ್ಟಲಿಂಗಪ್ಪ ಸೇರಿದಂತೆ ಸಮಾಜದ ನಾಗರಿಕರು ಇದ್ದರು.