ರಾವಂದೂರು ಗ್ರಾಮದಲ್ಲಿ ಬಸವ ಬಳಗದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿದ್ದಲಿಂಗ ಸ್ವಾಮೀಜಿ, ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ನಟರಾಜ ಸ್ವಾಮೀಜಿ ಇತರರು ಇದ್ದರು. 
ಮೈಸೂರು

ಉತ್ತಮ ಬದುಕಿಗೆ ಬಸವಣ್ಣ ಆದರ್ಶಗಳು ಅವಶ್ಯ

ಪ್ರಮುಖ ಮುಖ್ಯಾಂಶಗಳು

  • ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಹೇಳಿಕೆ
  • ಬಸವ ಜಯಂತಿ ಕಾರ್ಯಕ್ರಮ
ರಾವಂದೂರು: ಯಾವ ದೃಷ್ಟಿಕೋನದಲ್ಲಿ ನೋಡಿದರೂ 12ನೇ ಶತಮಾನ ಬೆಳಕಿನ ಯುಗವಾಗಿದೆ ಎಂದು ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದಲ್ಲಿ ಗುರುವಾರ ಬಸವ ಬಳಗದ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಹಿತ್ಯವಾಗಿ ಎಲ್ಲ ರಂಗಕ್ಕೂ ಬೆಳಕನ್ನು ನೀಡಿದ ಬಸವಾದಿ ಶರಣರ ಕಾಲವೇ 12ನೇ ಶತಮಾನವಾಗಿದೆ. ಬಸವಣ್ಣ ಅವರ ಬದುಕಿನ ಕಾಲವೇ ಒಂದು ಅದ್ಭುತವಾಗಿದೆ. ಹಾಗಾಗಿ, ಯುವ ಸಮೂಹ ಬಸವಣ್ಣ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬದುಕು ನಡೆಸಲು ಸಾಧ್ಯ. ಹಾಗಾಗಿ ಮನೆಯಲ್ಲಿ ಮಕ್ಕಳಿಗೆ ಅವರ ಆದರ್ಶಗಳನ್ನು ಹೇಳಿಕೊಡಬೇಕಿದೆ. ಇದರಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.
ಪಾಂಡವಪುರದ ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ನಾವೆಲ್ಲ ಋಷಿಮುನಿಗಳು, ಸಾಧು ಸಂತರು ಹಾಗೂ ಶಿವಶರಣರು ಅನುಯಾಯಿಗಳಾಗಿದ್ದೇವೆ. ಆದ್ದರಿಂದ ಭಾರತವನ್ನು ಸ್ವರ್ಗದ ನಾಡು ಎಂದು 12ನೇ ಶತಮಾನದ ಶಿವಶರಣರು ಬಣ್ಣಿಸಿದ್ದಾರೆ. ಭಾವನಾತ್ಮಕ, ಸ್ವಾರ್ಥ, ದ್ವೇಷ ಇಲ್ಲದ ದೇಶ ಭಾರತ. ನಮ್ಮ ಅಭಿವೃದ್ಧಿಯ ಜತೆಗೆ ಇತರ ದೇಶದ ಅಭಿವೃದ್ಧಿಗೂ ಸಹ ಕೈಜೋಡಿಸುವ ಯಾವುದಾದರೂ ದೇಶವಿದ್ದರೆ ಅದು ಭಾರತ ಮಾತ್ರ. ಇದಕ್ಕೆ ಮೂಲ ಕಾರಣವೇ 12ನೇ ಶತಮಾನದ ಶಿವಶರಣರ ಮಾರ್ಗದರ್ಶನ ಎಂದರು.
ಗಾವಡಗೆರೆ ಮಠದ ನಟರಾಜ ಸ್ವಾಮೀಜಿ ಮಾತನಾಡಿ, ಎಲ್ಲ ಸಮಾಜದವರಿಗೆ ಬಸವಣ್ಣನ ವಿಚಾರಗಳು ಅವಶ್ಯವಾಗಿದೆ. ಪ್ರಸ್ತುತ ಜನರು ತಮ್ಮ ಬದುಕನ್ನು ಗೊಂದಲದ ಗೂಡಿನಿಂದ ಬದುಕು ನಡೆಸುತ್ತಿದ್ದಾರೆ. ಅವರ ನೆಮ್ಮದಿ ಮತ್ತು ಉತ್ತಮ ಬದುಕಿಗೆ ಇಂತಹ ಶಿವಶರಣರ ವಿಚಾರಧಾರೆಗಳು ಬಹಳ ಮುಖ್ಯ ಹಾಗೂ ಶಿವಶರಣರ ತತ್ವ ಆದರ್ಶಗಳನ್ನು ನಾವು ಯಾವ ರೀತಿ ಅನುಸರಿಸಿದ್ದೇವೆ ಎಂಬುದರ ಬಗ್ಗೆ ಕ್ರಿಯಾಯೋಜನೆ ರೂಪಿಸಿಕೊಳ್ಳಬೇಕು ಎಂದರು.
ರಾವಂದೂರು ಮುರುಘ ಮಠದ ಶ್ರೀಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಕನ್ನಡ ಸಾಹಿತ್ಯ ಇಷ್ಟು ಶ್ರೀಮಂತವಾಗಿದ್ದರೆ ಅದಕ್ಕೆ ಕಾರಣ ಬಸವಣ್ಣ. 12ನೇ ಶತಮಾನದ ಶಿವಶರಣರ ವಚನಗಳು ಇಡೀ ವಿಶ್ವಕ್ಕೆ ಮೊದಲ ಸಂಸತ್ತನ್ನು ನೀಡಿದೆ. ಹೀಗಾಗಿ ಕಾಯಕ ಯೋಗಿಯ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ಪ್ರಶಸ್ತಿ ವಿಜೇತ ಪತ್ರಕರ್ತ ಪ್ರವೀಣ್ ಅವರನ್ನು ಸನ್ಮಾನಿಸಲಾಯಿತು.
ಉಕ್ಕಿನ ಕಂತೆ ಮಠದ ಸಾಂಬಸದಾಶಿವ ಸ್ವಾಮೀಜಿ, ಅಂಕನಹಳ್ಳಿ ಮಠದ ವಿಜಯಕುಮಾರ ಸ್ವಾಮೀಜಿ, ದಿಂದಗಾಡು ಮಠದ ನಟರಾಜ ಸ್ವಾಮೀಜಿ, ಮಾದಾಪುರದ ಮಲ್ಲಿಕಾರ್ಜುನ ಸ್ವಾಮೀಜಿ, ಕರ್ಪೂರವಳ್ಳಿ ಮಠದ ಅಭಿನವ ಚಂದ್ರಶೇಖರ ಸ್ವಾಮೀಜಿ, ಕಲ್ಮಟ್ಟದ ಮಹಾಂತ ಸ್ವಾಮೀಜಿ, ತೊರೆನೂರು ಮಲ್ಲೇಶ್ವರ ಸ್ವಾಮೀಜಿ ಹಾಗೂ ತಾಲೂಕು ವೀರಶೈವ ಸಮಾಜದ ಘಟಕದ ಅಧ್ಯಕ್ಷ ಪರಮೇಶ್, ಕುಮಾರ್, ವಿಜಯ್, ಸತೀಶ್, ಚಿಕ್ಕವೀರಪ್ಪ, ಕೂರ್ಗಲ್ ಶಿವಕುಮಾರ್, ಉಪನ್ಯಾಸಕ ಲಕ್ಷ್ಮೀಕಾಂತ್ ಇತರರಿದ್ದರು.