ಪ್ರೊ.ಮೊರಬದ ಮಲ್ಲಿಕಾರ್ಜುನ ಅವರ ‘ಬಸವ ವಚನ ಚಿಂತನ’ ಹಾಗೂ ಡಾ.ಬಿ.ವಿ.ವಸಂತಕುಮಾರ್ ಅವರ ‘ಅನುದಿನ ವಚನ’ ಪುಸ್ತಗಳನ್ನು ಗಣ್ಯರು ಬಿಡುಗಡೆ ಮಾಡಿದರು. ಡಾ.ಶ್ರೀ ಶರತ್‌ಚಂದ್ರ ಸ್ವಾಮೀಜಿ, ಪ್ರೊ.ಎಂ.ಕೃಷ್ಣೇಗೌಡ, ಡಾ.ರಾಜಪ್ಪ ದಳವಾಯಿ, ಪ್ರೊ.ಅಶೋಕ್ ಸಂಗಪ್ಪ ಆಲೂರ, ಡಿ.ಎನ್.ಲೋಕಪ್ಪ, ಎಂ.ಚಂದ್ರಶೇಖರ್ ಇದ್ದರು. 
ಮೈಸೂರು

ಬಸವಣ್ಣ ಎಂದೂ ಸಾಂಸ್ಕೃತಿಕ ನಾಯಕ

ಸದಾ ಕಾಲಕ್ಕೂ ವಿಶ್ವದ ವೇದಿಕೆಯಲ್ಲಿ ಕನ್ನಡ ಮತ್ತು ಕನ್ನಡ ನಾಡನ್ನು ಪ್ರತಿನಿಧಿಸುವ ವ್ಯಕ್ತಿ ಬಸವಣ್ಣ ಮಾತ್ರ ಎಂದು ಖ್ಯಾತ ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮೈಸೂರು ಮಹಾನಗರ ಪಾಲಿಕೆ, ಬಸವ ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಜಯಂತಿ ಕಾರ್ಯಕ್ರಮದಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’ ವಿಷಯ ಕುರಿತು ಮಾತನಾಡಿದರು.
ಬಸವಣ್ಣನವರು ಎಂದೂ ಸಾಂಸ್ಕೃತಿಕ ನಾಯಕ. ಆ ಕಾಲದಲ್ಲಿ ಉದ್ಭವಿಸಿದ ಎಲ್ಲ ಪ್ರಶ್ನೆಗಳನ್ನು ತನ್ನ ವಿಚಾರ ಮತ್ತು ನಡವಳಿಕೆಯಿಂದಲೇ ಉತ್ತರಿಸುತ್ತಾ ಹೋದರು. ಹಾಗಾಗಿ ಸಾಂಸ್ಕೃತಿಕ ನಾಯಕರಾಗಿರುವ ಬಸವಣ್ಣ ಅವರು ಸಾವಿರಾರು ವರ್ಷಗಳ ಕಾಲ ಸಾಂಸ್ಕೃತಿಕ ನಾಯಕರಾಗಿಯೇ ಉಳಿಯುತ್ತಾರೆ ಎಂದರು.
ಮನುಷ್ಯ ಪರಿಪೂರ್ಣನಲ್ಲ. ಪರಿಪೂರ್ಣತೆ ಕಡೆಗೆ ನಿರಂತರವಾಗಿ ನಡೆಯುವುದು, ಪರಿಪೂರ್ಣತೆಯನ್ನು ಹುಡುಕುವುದು, ಮತ್ತಷ್ಟು ಪಕ್ವತೆಯಾಗುವುದನ್ನು ಸಂಸ್ಕೃತಿ ಎನ್ನಬಹುದು. ನಾನು ಬಂದಾಗ ಈ ಜಗತ್ತು ಹೇಗಿತ್ತು, ಬಿಟ್ಟು ಹೋಗುವಾಗ ಈ ಜಗತ್ತನ್ನು ಮತ್ತಷ್ಟು ಸುಂದರವಾಗಿ ಮಾಡಿ ಹೋಗಬೇಕು ಎಂಬ ಆಕಾಂಕ್ಷೆ ಇದ್ದರೆ ಅಲ್ಲಿ ಸಂಸ್ಕೃತಿ ಇದೆ ಎಂದು ಅರ್ಥ. ಹಾಗಾಗಿ, ಸಾಂಸ್ಕೃತಿಕ ನಾಯಕರಾದ ಬುದ್ಧ, ಗಾಂಧಿ, ಬಸವಣ್ಣ ಅವರು ಯಾವಾಗಲೂ ಪ್ರಸ್ತುತರಾಗಿರುತ್ತಾರೆ. ರಾಜ್ಯ ಸರ್ಕಾರ ಘೋಷಣೆ ಮಾಡುವ ಮುನ್ನವೇ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಇಡೀ ಜಗತ್ತು ಗುರುತಿಸಿದೆ ಎಂದರು.
ಬಸವಣ್ಣ ಅವರನ್ನು ವಚನಗಳಲ್ಲಿ ಗ್ರಹಿಸುವುದು ಸ್ವಲ್ಪ ಸುಲಭ. ಎಷ್ಟೇ ಕಷ್ಟವಾದರೂ ಅವರು ವಚನದಲ್ಲಿ ಏನು ಹೇಳುತ್ತಿದ್ದಾರೆ ಎಂದು ಗ್ರಹಿಸಬಹುದು. ಆದರೆ, ಅವರ ವ್ಯಕ್ತಿತ್ವವನ್ನು ನಮ್ಮ ಮನಸ್ಸಿನಲ್ಲಿ ಹಿಡಿದಿಡುವುದು ಕಷ್ಟ. ಬಸವಣ್ಣನವರ ರೀತಿ ಒಂದು ದಿನ ಅಥವಾ ಒಂದು ಗಂಟೆ ಬದುಕುವುದು ಮತ್ತಷ್ಟು ಕಷ್ಟ. ಅಷ್ಟೆಲ್ಲಾ ರಾಜಾಧಿಕಾರ ಹೊಂದಿದ್ದ ಮನುಷ್ಯ, ಮಂತ್ರಿಯಾಗಿದ್ದವರು ಎನಗಿಂತ ಕಿರಿಯರಿಲ್ಲ ಎಂದು ಘೋಷಣೆ ಮಾಡುತ್ತಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಮಾನತೆ ತರಬೇಕು ಎಂದರೆ ನಾನು ಮೊದಲು ಅವನಿಗಿಂತ ಕಡೆಯಾಗಬೇಕು ಎನ್ನುತಾರೆ. ಆದರೆ, ನಮ್ಮಲ್ಲಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಎಷ್ಟು ಪ್ರತಿಷ್ಠೆಯಾಡುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ಬಸವಣ್ಣ ಅವರು 12ನೇ ಶತಮಾನದ ಚಳವಳಿಯ ಚಾಲಕ ಆಗಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿ ಹೇಳಿದರೂ ತಿದ್ದಿಕೊಳ್ಳುತ್ತಿದ್ದರು. ಎಲ್ಲರಿಗಿಂತಲೂ ನಾನು ಕಿರಿಯವ ಎಂದು ಹೇಳುವವನೇ ಜಗತ್ತಿನ ನಿಜವಾದ ನಾಯಕ. ಎಲ್ಲರಿಗಿಂತಲೂ ನಾನು ಚಿಕ್ಕವನು ಎಂದವರು ದೊಡ್ಡವನಾಗುತ್ತಾನೆ. ಇದಕ್ಕೆ ಸೂಕ್ತ ಉದಾಹರಣೆ ಬಸವಣ್ಣ. ಅವರು ಅಹಂಕಾರವನ್ನು ವಿನಯದಿಂದ ಓಡಿಸುತ್ತಾರೆ ಎಂದರು.
‘ಕನ್ನಡ ರಂಗಭೂಮಿಯಲ್ಲಿ ಬಸವಣ್ಣ’ ವಿಷಯ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ ಮಾತನಾಡಿ, ಜಗಜ್ಯೋತಿ ಬಸವೇಶ್ವರ ಮತ್ತು ಕಿತ್ತೂರು ಚನ್ನಮ್ಮ ನಾಟಕಗಳು ಕನ್ನಡದಲ್ಲಿ ಹೆಚ್ಚು ಪ್ರದರ್ಶನ ಕಂಡ ನಾಟಕಗಳಾಗಿವೆ. ಜಗಜ್ಯೋತಿ ಬಸವೇಶ್ವರ ನಾಟಕ ಇಡೀ ಶರಣ ಸಂಸ್ಕೃತಿಯನ್ನು ಕಟ್ಟಿಕೊಡುತ್ತದೆ. ಬಸವ ಜಯಂತಿಗಳ ಕೂಡ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಶರಣರ ಆಂದೋಲನ ಇಂದಿಗೂ ದೊಡ್ಡದು. ಆದ್ದರಿಂದ ಜಾತಿ, ತಾರತಮ್ಯ, ಲಿಂಗ ಭೇದಗಳನ್ನು ಮೀರಿ ಬದುಕುವ ಬಗ್ಗೆ ಈ ಸಂದರ್ಭದಲ್ಲಿ ಯೋಚಿಸಬೇಕು. ಬಸವಣ್ಣನ ತತ್ವಗಳಂತೆ ನಾವು ಬದುಕಿದಾಗ ಮಾತ್ರ ಅವರಿಗೆ ಗೌರವ ನೀಡಬಹುದು. ಬಸವಾದಿ ಶರಣರನ್ನು ನೆನೆಯುವ ಜೊತೆಗೆ ಅವರ ಆಲೋಚನ ಕ್ರಮದ ರೀತಿ ಬದುಕಿದಾಗ ನಮ್ಮ ಜೀವನ ಸಾರ್ಥಕ. ಕನ್ನಡ ರಂಗಭೂಮಿ ನಿರಂತರವಾಗಿ ಶರಣರನ್ನು ಹೊಸ ಹೊಸದಾಗಿ ಸೃಷ್ಟಿ ಮಾಡುತ್ತಿದೆ ಎಂದರು.
‘ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವ’ ಕುರಿತು ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರ ಮಾತನಾಡಿ, ಬಸವಣ್ಣ ಅವರು ಸಂಘಟನೆಯ ಬೀಜ ಮಂತ್ರ, ಕಾಯಕ ಸೂತ್ರದ ತಾಯಿ ಬೇರು, ವಚನ ಜ್ಞಾನದ ಸಾಗರ ಎಂದರು.
ಇದೇ ವೇಳೆ ಪ್ರೊ.ಮೊರಬದ ಮಲ್ಲಿಕಾರ್ಜುನ ಅವರ ‘ಬಸವ ವಚನ ಚಿಂತನ’ ಹಾಗೂ ಡಾ.ಬಿ.ವಿ.ವಸಂತಕುಮಾರ್ ಅವರ ‘ಅನುದಿನ ವಚನ’ ಪುಸ್ತಕ ಬಿಡುಗಡೆ ಮಾಡಲಾಯಿತು. ಕುಂದೂರು ಮಠದ ಡಾ.ಶ್ರೀ ಶರತ್‌ಚಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶಕ ಡಿ.ಎನ್.ಲೋಕಪ್ಪ, ಎಂ.ಚಂದ್ರಶೇಖರ್ ಇದ್ದರು.