ಮೈಸೂರು ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಸವ ಜಯಂತಿ ಆಯೋಜನಾ ಸಮಿತಿ ಅಧ್ಯಕ್ಷ ಎಂ. ಚಂದ್ರಶೇಖರ್ ಬಸವ ಜಯಂತಿ ಕುರಿತು ಮಾಹಿತಿ ನೀಡಿದರು.
ಮೈಸೂರು: ಬಸವ ಬಳಗಗಳ ಒಕ್ಕೂಟ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ವತಿಯಿಂದ ಏ.19, 20 ರಂದು ನಗರದ ಕಲಾ ಮಂದಿರದಲ್ಲಿ ಬಸವ ಜಯಂತಿ ಆಯೋಜಿಸಲಾಗಿದೆ ಎಂದು ಆಯೋಜನಾ ಸಮಿತಿ ಅಧ್ಯಕ್ಷ ಎಂ. ಚಂದ್ರಶೇಖರ್ ತಿಳಿಸಿದರು.
ಏ.19 ರಂದು ಬೆಳಗ್ಗೆ 8.30ಕ್ಕೆ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ವೃತ್ತದಿಂದ ಕಲಾಮಂದಿರವರೆಗೆ ಭವ್ಯ ಮೆರವಣಿ ಆಯೋಜಿಸ ಲಾಗಿದೆ. ಮೆರವಣಿಗೆಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಚಾಲನೆ ನೀಡುವರು. ಮಧ್ಯಾಹ್ನ 1ಕ್ಕೆ ಕಲಾ ಮಂದಿರ ಆವರಣದಲ್ಲಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ಜೆಎಸ್‌ಎಸ್ ಮಹಾವಿದ್ಯಾಪೀಠದ ಗೌರವ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ಉದ್ಘಾಟಿಸುವರು. ಮಧ್ಯಾಹ್ನ 1.30ಕ್ಕೆ ಸುಚಿತ್ರಾ ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿರುವ ವಚನ ಚಿತ್ರ ಪ್ರದರ್ಶನವನ್ನು ಹಿರಿಯ ಲೇಖಕ ಪ್ರೊ.ಸಿ.ನಾಗಣ್ಣ ಉದ್ಘಾಟಿಸುವರು. ಮಧ್ಯಾಹ್ನ 2ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಏ.20 ರಂದು 9.30ಕ್ಕೆ ನೂತನ ಡಿಸಿ ಕಚೇರಿ ಮುಂಭಾಗ ಬಸವಣ್ಣ ಅವರ ಪ್ರತಿಮೆ ಸ್ಥಾಪನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಕಲಾ ಮಂದಿರದಲ್ಲಿ ಬಸವ ಜಯಂತಿ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಮಧ್ಯಾಹ್ನ 2ಕ್ಕೆ ವಿಚಾರಗೋಷ್ಠಿ ಹಾಗೂ ಕೃತಿಗಳ ಬಿಡುಗಡೆ ಆಯೋಜಿಸಲಾಗಿದೆ. ಪ್ರೊ.ಮೊರಬದ ಮಲ್ಲಿಕಾರ್ಜುನ ರಚನೆಯ ಬಸವ ವಚನ ಚಿಂತನ, ಡಾ.ಬಿ.ವಿ. ವಸಂತಕುಮಾರ್ ರಚನೆಯ ಅನುದಿನ ವಚನ ಕೃತಿಯನ್ನು ಶ್ರೀ ಕುಂದೂರು ಮಠದ ಶ್ರೀ ಶರತ್‌ಚಂದ್ರ ಸ್ವಾಮೀಜಿ ಬಿಡುಗಡೆ ಮಾಡುವರು. ನಂತರ ಬಹುಮುಖಿ ನೆಲೆಯಲ್ಲಿ ಬಸವಣ್ಣ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು, ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ರಾಜಪ್ಪ ದಳವಾಯಿ, ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಮಾತನಾಡಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವ ಜಯಂತಿ ಸಮಿತಿ ಪದಾಧಿಕಾರಿಗಳಾದ ಜಿ.ಎಂ. ಜೈಶಂಕರ್ ಜೀಮಾರಹಳ್ಳಿ, ಕೆ.ವಿ. ಮಲ್ಲೇಶ್, ಹರೀಶ್, ಆಯರಹಳ್ಳಿ ಪಿ. ವಿರೂಪಾಕ್ಷ, ದೇವರಾಜು ಪಿ. ಚಿಕ್ಕಹಳ್ಳಿ, ದಾರಿಪುರ ಡಿ. ಚಂದ್ರಶೇಖರ್ ಇದ್ದರು.