ಕೆ.ಆರ್.ನಗರದ ಬಸವೇಶ್ವರ ಬ್ಲಾಕ್‌ನಲ್ಲಿರುವ ಬಸವಣ್ಣನವರ ಪುತ್ಥಳಿಗೆ ಶಾಸಕ ಡಿ.ರವಿಶಂಕರ್ ಮಾಲಾರ್ಪಣೆ ಮಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಇತರರು ಇದ್ದರು.
ಕೆ.ಆರ್.ನಗರ : ಸಮಾಜದ ಮುಖಂಡರ ಜತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಈಗಿರುವ ಬಸವ ಭವನದ ನಿವೇಶನವನ್ನು ವೀರಶೈವ ಲಿಂಗಾಯತ ಸಮುದಾಯದ ಟ್ರಸ್ಟ್ ಹೆಸರಿಗೆ ಬರೆಸುವುದರ ಜತೆಗೆ ಅನುದಾನ ನೀಡಿ ಭವನ ನಿರ್ಮಿಸಿ ಕೊಡಲಾಗುವುದು ಎಂದು ಶಾಸಕ.ಡಿ.ರವಿಶಂಕರ್ ಭರವಸೆ ನೀಡಿದರು.
ಪಟ್ಟಣದ ಬಸವೇಶ್ವರ ಬ್ಲಾಕ್‌ನಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಸಮಾಜದ ಮುಖಂಡರೊಟ್ಟಿಗೆ ಮಾಲಾರ್ಪಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣ ಮಾಡುವ ಗುರಿಯನ್ನು ಬಸವಣ್ಣನವರು ಹೊಂದಿದ್ದು ದೇಶ ಬೆಳೆಯಲು ಮತ್ತು ಅಭಿವೃದ್ಧಿ ಪಥದಲ್ಲಿ ಸಾಗಲು ಬಸವಣ್ಣನವರ ಕೊಡುಗೆ ಅಪಾರ. ವೀರಶೈವ ಲಿಂಗಾಯತ ಸಮಾಜ ಇಷ್ಟಂಗ ಧಾರಣೆ ಮಾಡುವ ಮೂಲಕ ಪೂಜೆ ಸಲ್ಲಿಸುತ್ತಿದೆ ಎಂದರು.
ಬಸವಣ್ಣನವರ ಅಂದೇ ಅನುಭವ ಮಂಟಪ ಸ್ಥಾಪಿಸಿ ಸಮಾಜದಲ್ಲಿದ್ದ ತಾರತಮ್ಯ, ಅಸಮಾನತೆಯನ್ನು ತೊಡೆದು ಹಾಕಲು ನಿರಂತರವಾಗಿ ಹೋರಾಟ ಮಾಡಿದ್ದರು. ಜತೆಗೆ ವಚನ ಸಾಹಿತ್ಯಕ್ಕೆ ಅವರಿಂದ ಸಿಕ್ಕ ಕೊಡುಗೆ ಅಪಾರ. ಇದಕ್ಕಾಗಿ ಸರ್ಕಾರ ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ನಾಮಕರಣ ಮಾಡಿದೆ ಎಂದು ತಿಳಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ ಮಾತನಾಡಿ, ಬಸವಣ್ಣನವರ ವಚನವನ್ನು ಯಾವ ವ್ಯಕ್ತಿಯೂ ಪಾಲಿಸುತ್ತಿಲ್ಲ. ಸಮಾಜದ ಪರಿಸ್ಥಿತಿ ಅರಿತು ಧಾರ್ಮಿಕ ನಡೆಗಳ ಬಗ್ಗೆ ಚರ್ಚೆ ಮಾಡಿದಾಗ 900 ವರ್ಷಗಳ ಹಿಂದೆಯೇ ಸಮಾಜದ ಸುಧಾರಣೆ ಮಾಡಿದ ಮಹಾನ್ ಪುರುಷ ಬಸವಣ್ಣ. ಎಲ್ಲ ಸಮಾಜದವರು ಒಂದೇ ಎಂದು ಪ್ರತಿಪಾದಿಸಿದ ಬಸವಣ್ಣನವರು ಸಮಾಜವನ್ನು ಸರಿದಾರಿಗೆ ತರಲು ಪ್ರಯತ್ನ ಮಾಡಿದರು ಎಂದು ತಿಳಿಸಿದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ, ವಿಶ್ವಗುರು ಜಾತಿ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹೋರಾಟ ಮಾಡಿದ್ದರು. ಬಸವಣ್ಣನವರು ಕೊಟ್ಟ ಅನೇಕ ಆದರ್ಶವನ್ನು ಕಿಂಚಿತ್ತಾದರೂ ಪಾಲನೆ ಮಾಡಬೇಕು ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಗಡ್ಡಮಹೇಶ್, ನಿರ್ದೇಶಕ ಸೈಯದ್ ಜಾಬೀರ್, ಕೆಪಿಸಿಸಿ ಸದಸ್ಯ ಸಿ.ಪಿ.ರಮೇಶ್, ಪುರಸಭೆ ಮಾಜಿ ಅಧ್ಯಕ್ಷ ಕೋಳಿ ಪ್ರಕಾಶ್, ಎಪಿಎಂಸಿ ಮಾಜಿ ನಿರ್ಧೇಶಕ ಎಲ್.ಪಿ.ರವಿಕುಮಾರ್, ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಮನೋಹರಿ ನಾಗರಾಜ್, ಜಿಲ್ಲಾ ನಿರ್ದೇಶಕಿ ರೂಪಾ ಸತೀಶ್, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಸಣ್ಣಲಿಂಗಪ್ಪ, ವಕೀಲ ಕೊಡಿಯಾಲ ಮಹೇಶ್, ಶಿಕ್ಷಕ ಗಂಗಾಧರ್, ಬಿಇಒ ಆರ್.ಕೃಷ್ಣಪ್ಪ, ಸಿಡಿಪಿಒ ಅಣ್ಣಯ್ಯ, ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್, ಪಶುವೈದ್ಯ ಡಾ.ಹರೀಶ್ ಸೇರಿದಂತೆ ಅನೇಕರು ಇದ್ದರು.