ಬನ್ನೂರಿನ ಸಮೀಪದ ಯಾಚೇನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪರಿಶೀಲನೆಗಾಗಿ ಭೇಟಿ ನೀಡಿದ್ದ ಸಹಕಾರಿ ನಿಬಂಧಕ ಡಾ.ವೆಂಕಟೇಶ್ ಅವರನ್ನು ವೈ.ಎನ್.ಶಂಕರೇಗೌಡ ಸನ್ಮಾನಿಸಿದರು. ಪಿ.ಶಶಿಧರ್, ಬಲ್ಲೇನಹಳ್ಳಿ ಶಂಕರ್, ಕಾರ್ಯನಿರ್ವಹಣಾಧಿಕಾರಿ ವೈ.ಕೆ. ಕ್ಯಾತೇಗೌಡ ಮತ್ತಿತರರಿದ್ದರು.
ಬನ್ನೂರು: ಸಹಕಾರ ಸಂಘ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸರ್ಕಾರ ಸೌಲಭ್ಯ ವ್ಯವಸ್ಥಿತವಾಗಿ ಜನರಿಗೆ ತಲುಪುವಂತೆ ಮಾಡುವಲ್ಲಿ ಯಾಚೇನಹಳ್ಳಿ ಸಹಕಾರ ಸಂಘ ಮುಂದಿದೆ ಎಂದು ಸಹಕಾರಿ ನಿಬಂಧಕ ಡಾ.ವೆಂಕಟೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಯಾಚೇನಹಳ್ಳಿ ಗ್ರಾಮದ ಸಹಕಾರ ಸಂಘಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಪರಿಶೀಲಿಸಿ ಮಾತನಾಡಿದರು.
ಸಹಕಾರ ಸಂಘ ಸಹಕಾರಿಗಳನ್ನು ಸದುಪಯೋಗಪಡಿಸಿಕೊಂಡರೆ ಅಭಿವೃದ್ಧಿ ಮಾಡಬಹುದು ಎನ್ನುವುದನ್ನು ಶಂಕರೇಗೌಡರ ತಂಡ ಮಾಡಿ ತೋರಿಸಿದೆ ಎಂದರು.
ರೈತರಿಗೆ ನೀಡುವ ಸಾಲ ಮರುಪಾವತಿ ಮಾಡಿಸಿಕೊಳ್ಳುವುದು ಸುಲಭವಲ್ಲ. ಆದರೆ ಇಲ್ಲಿನ ಸಹಕಾರಿಗಳು ರೈತರಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಿಸಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂದರು.
ಬೆಳೆಸಾಲ, ರಸಗೊಬ್ಬರ ಮಾರಾಟ, ಜನೌಷಧಿ ಕೇಂದ್ರ, ಸಹಕಾರಿ ಜನತಾ ಬಜಾರ್, ಸೌರವಿದ್ಯುತ್ ಮಾರಾಟ, ಗ್ರಂಥಾಲಯ, ನೀರಿನ ಸೌಕರ್ಯ, ತರಬೇತಿ ಕೊಠಡಿ ಮೊದಲಾದವನ್ನು ವೀಕ್ಷೀಸಿ ಪ್ರಶಂಸಿದರಲ್ಲದೆ, ಗಣಕೀಕರಣ ಯೋಜನೆ ಮತ್ತು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಪುರಸ್ಕೃತ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದರು. ಇದೇ ಮಾದಿರಿಯಲ್ಲಿ ರಾಜ್ಯದ ಸಹಕಾರಿ ಸಂಘಗಳು ಅಭಿವೃದ್ಧಿಯಾಗುವಂತೆ ತಿಳಿಸಿದರು.
ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ ಮಾತನಾಡಿ, ಒಂದೆಡೆ ಕುಳಿತು ಆರಂಭಿಸಿದ ಸಹಕಾರ ಸಂಘ ಇಂದು ಕೋಟಿ ರೂ.ವ್ಯವಹಾರ ಮಾಡುವ ಮಟ್ಟಕ್ಕೆ ಬೆಳೆದಿದೆ. ಸಹಕಾರ ಕ್ಷೇತ್ರಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಬಳಸಿಕೊಂಡು ಸಂಘದ ಅಭಿವೃದ್ಧಿ ಮಾಡಲಾಗುತ್ತಿದೆ. ಸಹಕಾರಿಗಳ ಸಹಕಾರದಿಂದ ಒಂದು ಸುಸಜ್ಜಿತ ವಿವಿಧೋಶದ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು, ಅದರ ಸೌಲಭ್ಯ ಸಾರ್ವಜನಿಕರಿಗೆ ಸಿಗುವಂತಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.
ಸಹಕಾರ ಸಂಘದ ಜಂಟಿ ನಿಬಂಧಕ ಪಿ. ಶಶಿಧರ್, ಡಿಸಿಸಿ ಬ್ಯಾಂಕ್ ಸಿಇಒ ಬಲ್ಲೇನಹಳ್ಳಿ ಶಂಕರ್, ಉಪನಿಬಂಧಕ ಬೀರೇಂದ್ರ, ಸಹಾಯಕ ನಿರ್ದೇಶಕ ಮನೋಜ್‌ಕುಮಾರ್, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ಅಜಮತ್‌ಪಾಷ, ಹಸೀನಾ, ಮಂಜು, ರಘು, ಜಿಲ್ಲಾ ಬ್ಯಾಂಕ್ ಮೇಲ್ವೀಚಾರಕ ಅನಿಲ್‌ಕುಮಾರ್, ವೈ.ಎಂ. ಚಂದ್ರು, ನಾಡ ಯಜಮಾನರಾದ ಹನುಮಂತೇಗೌಡ, ಮಹೇಂದ್ರ, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ.ಕ್ಯಾತೇಗೌಡ, ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.