ಬನ್ನೂರಿನ ಸಂತೇಮಾಳದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಕಚೇರಿಗೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಹೋಬಳಿ ಅತ್ತಹಳ್ಳಿ ಅರುಣ್‌ಕುಮಾರ್ ನೇತೃತ್ವದಲ್ಲಿ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಬನ್ನೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ನಾಲೆಗಳಿಗೆ ಕಟ್ಟು ನೀರು ಬಿಡುವಂತೆ ಸೂಚನೆ ನೀಡಿರುವುದು ಅವೈಜ್ಞಾನಿಕವಾಗಿದ್ದು, ನಾಲೆಯ ಕೊನೆ ಭಾಗದ ರೈತರಿಗೆ ನೀರು ತಲುಪುವುದಿಲ್ಲ. ಆದ್ದರಿಂದ ಕನಿಷ್ಠ 20 ದಿನವಾದರೂ ನೀರು ಬಿಟ್ಟರೇ ಜಾನುವಾರುಗಳಿಗೆ ಬೇಕಾದ ಮೇವನ್ನಾದರೂ ಬೆಳೆಯುತ್ತೇವೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಬನ್ನೂರು ಹೋಬಳಿ ಅತ್ತಹಳ್ಳಿ ಅರುಣ್‌ಕುಮಾರ್ ತಿಳಿಸಿದರು.
ಅವರು ಪಟ್ಟಣದ ಸಂತೇಮಾಳದಲ್ಲಿರುವ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಕಚೇರಿಗೆ ರೈತರೊಂದಿಗೆ ಮುತ್ತಿಗೆ ಹಾಕಿ ಮಾತನಾಡಿದರು.
ಮುಂಗಾರು ಮಳೆ ಕೈಕೊಟ್ಟಿದ್ದು, ಕಬ್ಬು, ಭತ್ತ ಬೆಳೆಯಬೇಡಿ ಎಂದು ಸೂಚನೆ ನೀಡುತ್ತೀರಿ. ಹೀಗಾದರೆ ರೈತರ ಬದುಕು ನಡೆಸುವುದು ಹೇಗೆ? ಎಂದು ಪ್ರಶ್ನಿಸಿದ ಅವರು, ಭತ್ತ ಬೆಳೆದರೆ ಜಾನುವಾರುಗಳಿಗೆ ಹುಲ್ಲಿನ ಮೇವಾದರೂ ದೊರಕುತ್ತಿತ್ತು. ಈಗ ಅದೂ ಇಲ್ಲದಂತಾಗುತ್ತಿದೆ. ಜಾನುವಾರುಗಳ ಪಾಲನೆಗೆ ರೈತ ಎಲ್ಲಿಂದ ಮೇವನ್ನು ಒದಗಿಸಲು ಸಾಧ್ಯ, ಇದು ಅಧಿಕಾರಿಗಳ ಗಮನಕ್ಕೇ ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಸರ್ಕಾರವೇ ಕೆರೆ-ಕಟ್ಟೆಯನ್ನು ತುಂಬಿಸುವಂತೆ ಆದೇಶ ನಿಡಿದ್ದರೂ ಚಾಮನಹಳ್ಳಿ ಹಾಗೂ ಬೆಟ್ಟಹಳ್ಳಿ ಕೆರೆಯನ್ನು ತುಂಬಿಸಲು ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕೂಡಲೇ ಕೆರೆ ತುಂಬಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಕೆರೆ ತುಂಬಿದರೆ ಕನಿಷ್ಠ ಜಾನುವಾರುಗಳಿಗೆ ಬೇಕಾದ ಮೇವನ್ನಾದರೂ ರೈತ ಬೆಳೆದುಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಿದಂತೆ ಆಗುತ್ತದೆ ಎಂದು ತಿಳಿಸಿದರು. ಕೋಡಿಗಳು ದುರಸ್ತಿಯಲ್ಲಿದ್ದು, ಇದುವರೆಗೂ ಏಕೆ ಬಂದು ನೋಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಕೂಡಲೇ ಕಾವೇರಿ ನೀರಾವರಿ ಅಧಿಕಾರಿಗಳು ಎಚ್ಚೆತ್ತು ಚಾಮನಹಳ್ಳಿ ಹಾಗೂ ಬೆಟ್ಟಹಳ್ಳಿ ಕೆರೆಯನ್ನು ತುಂಬಿಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡಬೆಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಇಇ ರತೀಶ್ ಮಾತನಾಡಿ, ಚಾಮನಹಳ್ಳಿ ಕೆರೆ ತುಂಬಿಸಲು ವಿಸಿ ಚಾನೆಲ್‌ನಿಂದ ಪೈಪ್ ಅಳವಡಿಸುವ ಕಾರ್ಯವನ್ನು ದಾಸೇಗೌಡನಕೊಪ್ಪಲಿನ ಮೂಲಕ ಮಾಡಲಾಗುವುದು ಹಾಗೂ ಬೆಟ್ಟಹಳ್ಳಿ ಕೆರೆ ತುಂಬಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆಯನ್ನು ನೀಡಿದರು.
ಪ್ರತಿಭಟನೆಯಲ್ಲಿ ಮಧು, ಚೇತನ, ಶಿವಕುಮಾರ, ಶಂಕರೇಗೌಡ, ಶೇಖರ, ಎಲ್.ಕೃಷ್ಣೇಗೌಡ, ನಿಂಗಣ್ಣ, ನಂಜೇಗೌಡ, ಅಜಯ್, ರಂಗಸ್ವಾಮಿ, ಬೆಟ್ಟಹಳ್ಳಿ ಪ್ರಕಾಶ್, ನಾರಾಯಣ್, ಸತೀಶ, ಬಸವನಹಳ್ಳಿ ಶ್ರೀಧರ್ ಮತ್ತಿತರರಿದ್ದರು.