ಬೆಟ್ಟದಪುರ ಸಮೀಪದ ಅಲ್ಪನಾಯಕನಹಳ್ಳಿ ಗ್ರಾಮದಲ್ಲಿ ಕಳೆದ ಒಂಬತ್ತು ವರ್ಷಗಳ ಬಳಿಕ ಬಂಡಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 
ಮೈಸೂರು

ಅಲ್ಪನಾಯಕನಹಳ್ಳಿಯಲ್ಲಿ ಬಂಡಿಹಬ್ಬದ ಸಂಭ್ರಮ

ಬೆಟ್ಟದಪುರ: ಇಲ್ಲಿಗೆ ಸಮೀಪದ ಅಲ್ಪನಾಯಕನಹಳ್ಳಿ ಗ್ರಾಮದಲ್ಲಿ ಕಳೆದ ಒಂಬತ್ತು ವರ್ಷಗಳ ಬಳಿಕ ಬಂಡಿಹಬ್ಬವನ್ನು ಇತ್ತಿಚೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ಆರಾಧ್ಯ ದೇವತೆಗಳಾದ ದೊಡ್ಡಮ್ಮತಾಯಿ ಹಾಗೂ ಚಿಕ್ಕಮ್ಮತಾಯಿಯ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ-ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಗ್ರಾಮದಲ್ಲಿ ವಿಶೇಷವಾಗಿ ನಿರ್ಮಿಸಲಾಗಿದ್ದ ಬಂಡಿಯಲ್ಲಿ ದೊಡ್ಡಮ್ಮತಾಯಿ ಹಾಗೂ ಚಿಕ್ಕಮ್ಮತಾಯಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.
ಹಬ್ಬದ ವಿಶೇಷ ಆಕರ್ಷಣೆಯಾಗಿ ರಾಟೆ, ಸುರ್‌ಸುರ್ ಪಟಾಕಿ ಪ್ರದರ್ಶನ ನಡೆಯಿತು. ನೆಲದ ಮೇಲೆ ಇಟ್ಟಾಗ ವೇಗವಾಗಿ ಸುತ್ತುತ್ತಾ ಬಣ್ಣಬಣ್ಣದ ಕಿಡಿಗಳನ್ನು ಚೆಲ್ಲಿದ ಪಟಾಕಿ ಹಾಗೂ ಅದರ ವಿಶಿಷ್ಟ ಶಬ್ದ ಅಲ್ಲಿದ್ದ ಜನರನ್ನು ರಂಜಿಸಿತು. ಪಟಾಕಿ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಹಬ್ಬದ ಪ್ರಯುಕ್ತ ಗ್ರಾಮದೆಲ್ಲೆಡೆ ತಳಿರು ತೋರಣಗಳು,ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಯುವಕರು ತಮಟೆ ಮತ್ತು ವಾದ್ಯಗಳ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.