ಗಣೇಶ್ ಮೂರ್ತಿ 
ಮೈಸೂರು

ಪಿಒಪಿ ಗೌರಿ-ಗಣೇಶಮೂರ್ತಿ ತಯಾರಿಕೆ ನಿಷೇಧ

ಪ್ರಮುಖ ಮುಖ್ಯಾಂಶಗಳು

  • ಮೈಸೂರು ನಗರಪಾಲಿಕೆಯಿಂದ ಕಡ್ಡಾಯ ಸೂಚನೆ
  • ಪರಿಸರ ಸ್ನೇಹಿ ಗಣಪ ಕೂಳ್ಳಲು ಮನವಿ

ಮೈಸೂರು: 

ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ), ಇತರ ರಾಸಾಯನಿಕ ವಸ್ತುಗಳಿಂದ ತಯಾರಿಸಿದ ಗೌರಿ-ಗಣೇಶ ಮೂರ್ತಿಗಳ ತಯಾರಿಕೆ, ದಾಸ್ತಾನು, ಸಾಗಣೆ, ಪ್ರದರ್ಶನ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಮೈಸೂರು ಮಹಾ ನಗರಪಾಲಿಕೆ ತಿಳಿಸಿದೆ.

ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು, ಗಣೇಶಮೂರ್ತಿ ತಯಾರಕರು, ಮಾರಾಟಗಾರರು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಕೆಲ ಸೂಚನೆ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ವಿಷಕಾರಿ, ರಾಸಾಯನಿಕ, ಲೋಹಯುಕ್ತ ಹಾಗೂ ಕೃತಕ ಬಣ್ಣಗಳಿಂದ ಅಲಂಕರಿಸಿದ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಅವಕಾಶವಿರುವುದಿಲ್ಲ. ನೈಸರ್ಗಿಕ ಮಣ್ಣು, ಜೇಡಿ ಮಣ್ಣು ಹಾಗೂ ಪರಿಸರ ಸ್ನೇಹಿ ನೈಸರ್ಗಿಕ ಬಣ್ಣಗಳಿಂದ ಮಾತ್ರ ಮೂರ್ತಿ ತಯಾರಿಸಲು, ಮಾರಾಟ ಮಾಡಲು ಮತ್ತು ಪೂಜಿಸಲು ಅವಕಾಶವಿರುತ್ತದೆ. ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ಮೂರ್ತಿಗಳನ್ನು ಕೆರೆ, ನದಿ, ಕಾಲುವೆ, ಬಾವಿ ಅಥವಾ ಇತರ ಯಾವುದೇ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಮೂರ್ತಿಗಳನ್ನು ಪಾಲಿಕೆಯಿಂದ ಗುರುತಿಸಲಾಗುವ ನಿಗದಿತ ವಿಸರ್ಜನಾ ಸ್ಥಳಗಳು ಅಥವಾ ತಾತ್ಕಾಲಿಕ ವಿಸರ್ಜನಾ ತೊಟ್ಟಿಗಳಲ್ಲಿ ಮಾತ್ರ ವಿಸರ್ಜಿಸಬೇಕು. ಮೂರ್ತಿ ವಿಸರ್ಜನೆಗೂ ಮೊದಲು ಹೂವು, ಹಾರ, ಬಟ್ಟೆ, ಅಲಂಕಾರಿಕ ಸಾಮಗ್ರಿ, ಪ್ಲಾಸ್ಟಿಕ್ ಹಾಗೂ ಇತರ ಪೂಜಾ ಸಾಮಗ್ರಿ ಪ್ರತ್ಯೇಕಿಸಬೇಕು. ಯಾವುದೇ ಪೂಜಾ ಸಾಮಗ್ರಿಯನ್ನು ಜಲಮೂಲಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು.
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆದು ವಿಧಿಸಲಾಗುವ ಷರತ್ತು ಕಡ್ಡಾಯವಾಗಿ ಪಾಲಿಸಬೇಕು. ನಿಷೇಧಿತ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳು, ಕಪ್‌ಗಳು, ತಟ್ಟೆಗಳು, ಚಮಚಗಳು, ಥರ್ಮೋಕೋಲ್ ಅಲಂಕಾರಿಕ ವಸ್ತುಗಳು ಹಾಗೂ ಇತರ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ಬಳಸಬಾರದು.
 ಹಸಿ ತ್ಯಾಜ್ಯ, ಒಣ ತ್ಯಾಜ್ಯ ಮತ್ತು ಪೂಜಾ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಪಾಲಿಕೆಯ ತ್ಯಾಜ್ಯ ಸಂಗ್ರಹಣಾ ಸಿಬ್ಬಂದಿಗೆ ಹಸ್ತಾಂತರಿಸಬೇಕು. ಗಣೇಶ ಮೂರ್ತಿ ತಯಾರಕರು, ದಾಸ್ತಾನುದಾರರು ಮತ್ತು ಮಾರಾಟಗಾರರು ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸಬೇಕು. ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳಿಂದ ತಯಾರಿಸಿದ ನಿಷೇಧಿತ ಮೂರ್ತಿಗಳ ತಯಾರಿಕೆ, ದಾಸ್ತಾನು ಅಥವಾ ಮಾರಾಟವನ್ನು ಕೂಡಲೇ ಸ್ಥಗಿತಗೊಳಿಸಬೇಕು.
 ಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ತಂಡಗಳಿಂದ ನಗರದ ಮೂರ್ತಿ ತಯಾರಿಕಾ ಘಟಕಗಳು, ಗೋದಾಮುಗಳು, ಮಾರಾಟ ಮಳಿಗೆಗಳು ಮತ್ತು ತಾತ್ಕಾಲಿಕ ಮಾರಾಟ ಸ್ಥಳಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಲಿದೆ. ನಿಯಮ ಉಲ್ಲಂಘಿಸಿದ್ದಲ್ಲಿ ಮೂರ್ತಿಗಳು, ಸಾಮಗ್ರಿಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಸಾರ್ವಜನಿಕರು ಪರಿಸರ ಸ್ನೇಹಿ ಮೂರ್ತಿ ಖರೀದಿಸಿ, ಮೈಸೂರಿನ ಕೆರೆಗಳು ಮತ್ತು ಜಲಮೂಲಗಳ ಸಂರಕ್ಷಣೆಗೆ ಸಹಕರಿಸುವುದರೊಂದಿಗೆ ಗೌರಿಗಣೇಶ ಹಬ್ಬವನ್ನು ಸ್ವಚ್ಛ, ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಪಾಲಿಕೆ ಆಯುಕ್ತ ಎಂ.ಕೆ. ಸವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.