ಬನ್ನೂರಿನ ಆರಕ್ಷಕ ಠಾಣೆಯಲ್ಲಿ ಗೌರಿಗಣೇಶ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಾಂತಿ ಸಭೆ ಆಯೋಜಿಸಲಾಗಿತ್ತು. ಪೊಲೀಸ್ ನಿರೀಕ್ಷಕ ಸತೀಶ್, ಗ್ರಾಮದ ಮುಖಂಡರು, ಡಿಜೆ ಸೌಂಡ್ ಮಾಲೀಕರು ಇತರರು ಇದ್ದರು. 
ಮೈಸೂರು

ಗಣೇಶೋತ್ಸವ ವೇಳೆ ಡಿಜೆ ಒಳಕೆ ನಿಷೇಧ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಪೊಲೀಸ್ ನಿರೀಕ್ಷಕ ಸತೀಶ್ ಮಾಹಿತಿ
  • ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ
ಬನ್ನೂರು : ಪಟ್ಟಣದಲ್ಲಿ ಶಾಂತಿ ಸೌಹಾರ್ದ ಕಾಪಾಡುವ ದೃಷ್ಟಿಯಿಂದ ಗಣೇಶೋತ್ಸವ ವೇಳೆ ಡಿಜೆ ಬಳಸುವಂತಿಲ್ಲ ಎಂದು ಪೊಲೀಸ್ ನಿರೀಕ್ಷಕ ಸತೀಶ್ ತಿಳಿಸಿದರು.
ಪಟ್ಟಣದ ಆರಕ್ಷಕ ಠಾಣೆಯಲ್ಲಿ ಗೌರಿಗಣೇಶ ಹಬ್ಬದ ಪ್ರಯುಕ್ತ ಗುರುವಾರ ಆಯೋಜಿಸಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಸಾರ್ವಜನಿಕ ಸ್ಥಳದಲ್ಲಿ ಗಣೇಶಮೂರ್ತಿ ಕೂರಿಸುವವರು ಪೊಲೀಸ್ ಠಾಣೆ, ವಿದ್ಯುತ್ ಪ್ರಸರಣ ಹಾಗೂ ಪುರಸಭೆಯಿಂದ ಕಡ್ಡಾಯವಾಗಿ ಅನುಮತಿ ಪತ್ರ ಪಡೆಯಬೇಕು. ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನನುಕೂಲವಾಗದಂತೆ ಮತ್ತು ದೊಡ್ಡ ದೊಡ್ಡ ಡೆಸಿಬಲ್ ಹೊಂದಿದ ಡಿಜೆಗಳನ್ನು ಬಳಸಬಾರದು ಎಂದರು.
ಗಣೇಶೋತ್ಸವದಲ್ಲಿ ಜಾನಪದ ಗೀತೆ, ಆರ್ಕೆಸ್ಟ್ರಾ, ಅನ್ನಸಂತರ್ಪಣೆ ಏರ್ಪಡಿಸುವಂತೆ ಸೂಚಿಸಿದ ಅವರು ಬೃಹತ್ ಫ್ಲೆಕ್ಸ್ ಹಾಕುವ ವೇಳೆ ಸಂಬಂಧಿಸಿದ ಇಲಾಖೆಯೊಂದಿಗೆ ಚರ್ಚಿಸಬೇಕು ಎಂದರು.
ಗಣಪತಿ ವಿಸರ್ಜನೆಯ ಮಾಹಿತಿಯನ್ನು ನೀಡಬೇಕಿದ್ದು, ರಾತ್ರಿ ಕಡ್ಡಾಯವಾಗಿ 9.30ರ ಒಳಗೆ ಮೆರವಣಿಗೆ ಮುಗಿಸಿ ವಿಸರ್ಜನೆಯಾಗಬೇಕು ಎಂದು ಹೇಳಿದರು. ವಿಸರ್ಜಿಸುವಂತ ಸಂದರ್ಭದಲ್ಲಿ ನುರಿತ ಈಜುಗಾರರು ಕಾರ್ಯ ನಿರ್ವಹಿಸುವಂತೆ ತಿಳಿಸಿದರು. ಯಾವುದೇ ಅನಾಹುತ ನಡೆದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಮುಖಂಡರು, ಡಿಜೆ ಸೌಂಡ್ ಮಾಲೀಕರು, ಗಣಪತಿ ಮಾರಾಟಗಾರರು, ಗಣಪತಿ ಪ್ರತಿಷ್ಠಾಪನೆ ಮಾಡುವವರು ಹಾಜರಿದ್ದರು.