ದೊಡ್ಡ ಹೊಸೂರು ಗ್ರಾಮದ ವೃತ್ತದಲ್ಲಿ ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಸಾರ್ವಜನಿಕರಿಗೆ ಕೆ.ಎನ್.ಹರೀಶ್ ಮಾಹಿತಿ ನೀಡಿದರು. ರವಿಕುಮಾರ್, ಮಂಜುಳಾ, ಲಕ್ಷ್ಮೀ ಇತರರಿದ್ದರು.
ಬೈಲುಕುಪ್ಪೆ: ವಿಬಿ ಜಿ ರಾಮ್ ಜಿ ಯೋಜನೆಯಡಿ ಸಿಗುವ ಸವಲತ್ತುಗಳನ್ನು ಕೂಲಿ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎನ್.ಹರೀಶ್ ಸಲಹೆ ನೀಡಿದರು.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡ ಹೊಸೂರು, ರಾಣಿ ಗೇಟ್, 16ನೇ ಸೈಟ್, ಚಿಕ್ಕ ಹೊಸೂರು ಗ್ರಾಮಗಳ ಮನೆ ಮನೆಗೆ ಭೇಟಿ ಮಾಡಿ ಕರಪತ್ರ ವಿತರಿಸಿ ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ಚಾಲ್ತಿಯಲ್ಲಿದೆ. ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ಈ ಕಾಯ್ದೆ ಜಾರಿಯಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಜಾಬ್‌ಕಾರ್ಡ್ ಮೇಳ ಸಂಬಂಧ ನಮೂನೆ-1 ರಲ್ಲಿ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಪಡೆಯುವಂತೆ, ವಿಬಿ-ಜಿ ರಾಮ್ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ತಾಲೂಕು ಐಇಸಿ, ಸಂಯೋಜಕರಾದ ರವಿಕುಮಾರ್ ಮಾತನಾಡಿ, ಕೂಲಿ ಕಾರ್ಮಿಕರಿಗೆ 100 ದಿನದಿಂದ 125 ಮಾನವ ದಿನ ಸೃಜನಕ್ಕೆ ಅವಕಾಶ ಕಲ್ಪಿಸಿದ್ದು, 370 ರೂ.ನಿಂದ 382 ರೂ.ಗಳಿಗೆ ಕೂಲಿ ಮೊತ್ತ ಹೆಚ್ಚಳಗೊಂಡಿದೆ. ನೂತನ ಯೋಜನೆಯ 318 ಕಾಮಗಾರಿಗಳ ಕುರಿತು ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳು ಕುರಿತು ಪುರುಷರು ಮತ್ತು ಮಹಿಳೆಯರು ಎಂಬ ಭೇದ ಭಾವ ಇಲ್ಲದೆ ಇಬ್ಬರಿಗೂ ಸಮಾನ ಕೂಲಿ ದೊರೆಯಲಿದೆ. 60 ದಿನಗಳು ಕೃಷಿ ಚಟುವಟಿಕೆಗೆ ಯೋಜನೆಯ ಕೂಲಿ ಕೆಲಸದಿಂದ ವಿರಾಮ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು.
ಸಾರ್ವಜನಿಕ ಸ್ಥಳದಲ್ಲಿ ವಿಬಿ ಜಿ ರಾಮ್ ಜಿ ಮಾಹಿತಿಯುಳ್ಳ ಕರಪತ್ರವನ್ನು ಅಂಟಿಸಿ ಅರಿವು ಮೂಡಿಸಲಾಯಿತು. ಕೊಪ್ಪ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಂಜುಳಾ, ಲಕ್ಷ್ಮೀ, ಗ್ರಾಮಸ್ಥರು ಹಾಜರಿದ್ದರು.