ಮರಡಿಯೂರು ಗ್ರಾಮಕ್ಕೆ ಸೇರಿದ ಗೌರಿಕೆರೆಯಲ್ಲಿ ಮೊಸಳೆ ಮರಿ ಕಾಣಿಸಿಕೊಂಡಿದ್ದು ಅದನ್ನು ಸೆರೆಹಿಡಿದು ಗ್ರಾಮದ ನಿವಾಸಿಗಳು ಉಪ ವಲಯ ಅರಣ್ಯಾಧಿಕಾರಿ ನಿಜಾಮುಲ್ಲಾ ಅವರಿಗೆ ಹಸ್ತಾಂತರಿಸಿದರು. ಜಾರ್ಜ್, ಗಣೇಶ್, ಡೇವಿಡ್, ವಾಸು ಇದ್ದರು. 
ಮೈಸೂರು

ಮರಡಿಯೂರು ಕೆರೆಯಲ್ಲಿ ಮೊಸಳೆ ಮರಿ ಪ್ರತ್ಯಕ್ಷ

ಬೈಲುಕುಪ್ಪೆ: ಮರಡಿಯೂರು ಗ್ರಾಮಕ್ಕೆ ಸೇರಿದ ಗೌರಿಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ಮರಿ ಗ್ರಾಮಸ್ಥರು ಅದನ್ನು ಹಿಡಿದು ಅರಣ್ಯ ಇಲಾಖೆಗೆ ಶುಕ್ರವಾರ ಹಸ್ತಾಂತರಿಸಿದರು.
ಪಿರಿಯಾಪಟ್ಟಣ ತಾಲೂಕಿನ ಆವರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಡಿಯೂರು ಗ್ರಾಮಕ್ಕೆ ಸೇರಿದ ಗೌರಿಕೆರೆಯಲ್ಲಿ ಗ್ರಾಮದ ಮಹಿಳೆ ಒಬ್ಬರು ದನ-ಕರುಗಳಿಗೆ ನೀರು ಕುಡಿಸಲು ಹೋದ ಸಂದರ್ಭ ಮೊಸಳೆ ಮರಿ ಕಾಣಿಸಿಕೊಂಡಿದೆ.
ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದಾಗ, ಗ್ರಾಮದ ನಿವಾಸಿ ಡೇವಿಡ್ ಎಂಬುವರು ಮೀನು ಬಲೆಯಿಂದ ಮೊಸಳೆ ಮರಿಯನ್ನು ಸೆರೆಹಿಡಿದರು. ವಿಷಯ ತಿಳಿದು ಆಗಮಿಸಿದ ಉಪ ವಲಯ ಅರಣ್ಯಾಧಿಕಾರಿ ನಿಜಾಮುಲ್ಲಾ ಅವರಿಗೆ ಮೊಸಳೆ ಮರಿಯನ್ನು ಅಧಿಕಾರಿಗೆ ಹಸ್ತಾಂತರಿಸಿದರು.
ಉಪವಲಯ ಅರಣ್ಯಾಧಿಕಾರಿ ಮಾತನಾಡಿ, ಮೊಸಳೆ ಮರಿ ಎರಡರಿಂದ ಮೂರು ತಿಂಗಳಾಗಿರಬಹುದು. ಅದನ್ನು ಸುರಕ್ಷಿತವಾಗಿ ಕಾವೇರಿ ನದಿಗೆ ಬಿಡಲಾಗುವುದು ಎಂದು ತಿಳಿಸಿದರು.
ಗ್ರಾಮದ ಮುಖಂಡ ಜಾರ್ಜ್ ಮಾತನಾಡಿ, ಕಾಡಂಚಿನಹಳ್ಳಿರುವ ಈ ಗೌರಿಕೆರೆ 5 ಎಕರೆಗೂ ಹೆಚ್ಚು ಇದ್ದು, ಗ್ರಾಮದ ದನ-ಕರುಗಳಿಗೆ ಹಾಗೂ ಬಟ್ಟೆ ಒಗೆಯಲು ಹಾಗೂ ಕಾಡಂಚಿನಲ್ಲಿರುವ ಪ್ರಾಣಿ ಪಕ್ಷಿಗಳಿಗೂ ನೀರು ಕುಡಿಯಲು ತುಂಬಾ ಸಹಕಾರಿಯಾಗುತ್ತದೆ ಎಂಬ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆ ಅವರ್ತಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗಿತ್ತು. ಎರಡು ವರ್ಷದಿಂದ ಇತ್ತೀಚೆಗೆ ಕೆರೆಗೆ ಹಸಿರು ಕಳೆ ಕೆರೆಯನ್ನೆಲ್ಲ ಸಂಪೂರ್ಣ ಆವರಿಸಿಕೊಂಡು ದನ, ಕರುಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು ತುಂಬಾ ತೊಂದರೆಯಾಗಿದೆ. ಈಗ ಮೊಸಳೆ ಮರಿ ಕಾಣಿಸಿಕೊಂಡಿದ್ದು ಅದರ ತಾಯಿ ಇಲ್ಲೇ ಇರಬಹುದು ಎಂದರು.
ಕೆರೆ ಆವರಿಸಿರುವ ಕಳೆ ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರು ಏನೋ ಪ್ರಯೋಜನವಾಗಿಲ್ಲ. ಹಿರಿಯ ಅಧಿಕಾರಿಗಳು ಕೂಡಲೇ ಕೆರೆಯ ಕಳೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಉಪ ವಲಯ ಅರಣ್ಯಾಧಿಕಾರಿ ನಿಜಾಮುಲ್ಲಾ, ನೌಕರ ವಾಸು, ಮುಖಂಡರಾದ ಜಾರ್ಜ್, ಗಣೇಶ್, ಡೇವಿಡ್, ಗ್ರಾಮಸ್ಥರಾದ ಬ್ರಿಟೊ ಜೋಸೆಫ್, ರಿದನ್ ಕಾವೇರಮ್ಮ ಮತ್ತಿತರರಿದ್ದರು.