ರೋಟರಿ ಇಂಡೋರ್ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ಗಣ್ಯರು ಚಾಲನೆ ನೀಡಿದರು. ರವಿ, ಯಶಸ್ವಿ ಸೋಮಶೇಖರ್, ಸಿ.ಕೆ.ನಟರಾಜ್, ಬಿ.ಆರ್. ವೆಂಕಟೇಶ್, ರಾಜ್ ಭಟ್, ಎಂ.ಮೋಹನ್ ಇದ್ದರು. 
ಮೈಸೂರು

ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ಚಾಲನೆ

ಅವಿನಾಶ್ ಜೈನಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಫ್ರೆಂಡ್ಸ್ ಸ್ಪೋರ್ಟ್ಸ್ ಜೋನ್‌ನಲ್ಲಿ ರೋಟರಿ ಇಂಡೋರ್ ಕಪ್
ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್ ಹಾಗೂ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ನಗರದ ಕೆ.ಸಿ. ಲೇಔಟ್‌ನ ಫ್ರೆಂಡ್ಸ್ ಸ್ಪೋರ್ಟ್ಸ್ ಜೋನ್‌ನಲ್ಲಿ ರೋಟರಿ ಇಂಡೋರ್ ಕಪ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ಚಾಲನೆ ದೊರೆಯಿತು.
ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದು, ಮೈಸೂರಿನ ಹಲವು ಪ್ರತಿಭಾವಂತ ಹಾಗೂ ಪ್ರಮುಖ ಬ್ಯಾಡ್ಮಿಂಟನ್ ಆಟಗಾರರು ಕಣಕ್ಕಿಳಿದಿದ್ದಾರೆ.
ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್ ಸಂಸ್ಥಾಪಕ ರವಿ ಚಾಲನೆ ನೀಡಿ, ಕ್ರೀಡೆ ಮತ್ತು ದೈಹಿಕ ಕ್ಷಮತೆಯನ್ನು ಉತ್ತೇಜಿಸುವುದರ ಜತೆಗೆ ರೋಟರಿ ಸಂಸ್ಥೆಯ ವಿವಿಧ ಸಮಾಜಸೇವಾ ಚಟುವಟಿಕೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಭಿಮಾನಿಗಳು ಹಾಗೂ ಪ್ರತಿಭಾವಂತ ಆಟಗಾರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಕ್ರೀಡೆಯ ಮೂಲಕ ಸಮಾಜಸೇವೆಯ ಸಂದೇಶ ಸಾರುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ಕ್ರೀಡೆ ಕೇವಲ ಗೆಲುವು-ಸೋಲಿನ ಸ್ಪರ್ಧೆಯಲ್ಲ. ಅದು ಶಿಸ್ತು, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಮಾಧ್ಯಮವಾಗಿದೆ. ಯುವಜನರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ನೀಡುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಯಶಸ್ವಿ ಸೋಮಶೇಖರ್ ಮಾತನಾಡಿ, ಕ್ರೀಡೆಯನ್ನು ಸಮಾಜ ಸೇವೆಯೊಂದಿಗೆ ಬೆಸೆಯುವ ಇಂತಹ ಕಾರ್ಯಕ್ರಮಗಳು ಆರೋಗ್ಯಕರ ಜೀವನಶೈಲಿಯ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಬೆಳೆಸುತ್ತವೆ. ಗೆಲುವಿಗಿಂತ ಭಾಗವಹಿಸುವ ಮನೋಭಾವ, ಕ್ರೀಡಾಸ್ಫೂರ್ತಿ ಹಾಗೂ ಪರಸ್ಪರ ಗೌರವವೇ ಕ್ರೀಡೆಯ ಪ್ರಮುಖ ಸಂದೇಶವಾಗಿದೆ ಎಂದರು.
ನೆಹರು ಯುವ ಕೇಂದ್ರದ ಮಾಜಿ ನಿರ್ದೇಶಕ ಸಿ.ಕೆ.ನಟರಾಜ್, ರೋಟರಿ ಕ್ಲಬ್ ಆಫ್ ಮೈಸೂರು ಸೌತ್ ಈಸ್ಟ್ ಅಧ್ಯಕ್ಷ ಬಿ.ಆರ್. ವೆಂಕಟೇಶ್, ಕಾರ್ಯದರ್ಶಿ ರಾಜ್ ಭಟ್, ಸಹಾಯಕ ಪ್ರಾಂತಪಾಲ ಎಂ. ಮೋಹನ್, ಕಾರ್ಯಕ್ರಮದ ಕಾರ್ಯದರ್ಶಿ ಎಂ.ರಾಜೀವ್ ಹಾಗೂ ಮೈಸೂರು ಚೆಸ್ ಸೆಂಟರ್ ನಿರ್ದೇಶಕ ನಾಗೇಂದ್ರ ಮುರಳೀಧರ್ ಇದ್ದರು.