ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅಧಿಕಾರಿಗಳ ಸಭೆ ನಡೆಸಿದರು. ಯುಕೇಶ್ ಕುಮಾರ್, ರೂಪಾ ಹಾಗೂ ಇತರರು ಇದ್ದರು.
ಮೈಸೂರು: ಹೊಸ ವರ್ಷ ಜನವರಿ 1 ರಂದು ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಚಾಮುಂಡಿ ಬೆಟ್ಟದಲ್ಲಿ ಜನವರಿ 2 ರಂದು ಲಲಿತಾ ಸಹಸ್ರನಾಮ ಕಾರ್ಯಕ್ರಮ, ಜನವರಿ 3 ಹಾಗೂ 4 ರಂದು ವಾರಾಂತ್ಯವಿದ್ದು, ದರ್ಶನಕ್ಕೆ ಬರುವ ಭಕ್ತಾದಿಗಳ ನೂಕು ನುಗ್ಗಲು ಉಂಟಾಗದಂತೆ ಸರದಿ ಸಾಲುಗಳನ್ನು ಹೆಚ್ಚಿಗೆ ಮಾಡುವಂತೆ ತಿಳಿಸಿದರು.
ಸುಗಮ ವಾಹನ ಸಂಚಾರಕ್ಕೆ ಹಾಗೂ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇ ಕು. ಹೆಚ್ಚಿನ ಜನದಟ್ಟಣೆ ಉಂಟಾದ ಸಂದರ್ಭದಲ್ಲಿ ಗಣ್ಯ ವ್ಯಕ್ತಿಗಳ ವಾಹನಗಳನ್ನು ಸಹ ಮಹಿಷಾಸುರ ಪ್ರತಿಮೆಯ ಬಳಿ ನಿಲ್ಲಿಸಿ ನಂತರ ಬ್ಯಾಟರಿ ಚಾಲಿತ ವಾಹನದಲ್ಲಿ ಕರೆದೊಯ್ಯುವುದು ಸೂಕ್ತ ಎಂದರು.
ಕುಡಿಯುವ ನೀರಿನ ವ್ಯವಸ್ಥೆಗಳನ್ನು ಹೆಚ್ಚಿನ ಸ್ಥಳಗಳಲ್ಲಿ ಮಾಡಬೇಕು. ಸ್ವಚ್ಛತೆ ಕಾಪಾಡಲು ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಬೇಕು. ಕೆಎಸ್‌ಆರ್‌ಟಿಸಿ ನಗರ ವಿಭಾಗದಿಂದ ಹೆಚ್ಚಿನ ಬಸ್‌ಟ್ರಿಪ್‌ಗಳನ್ನು ಒದಗಿಸುವಂತೆ ಸೂಚಿಸಿದರು.
ಆರೋಗ್ಯ ಇಲಾಖೆ ವತಿಯಿಂದ ಎರಡು ಅಂಬ್ಯೂಲೆನ್ಸ್‌ಅನ್ನು ನಿಯೋಜಿಸಬೇಕು ಹಾಗೂ ದಾನಿಗಳು ನೀಡುವ ಆಹಾರ ಪದಾರ್ಥ ಗುಣಮಟ್ಟ ಪರಿಶೀಲಿಸಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಚಾಮುಂಡಿಬೆಟ್ಟ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಹಾಗೂ ಇತರರು ಇದ್ದರು.