ಬಾಬು ಜಗಜೀವನ ರಾಂ ಜಯಂತಿ ಆಚರಣೆ ಸಂಬಂಧ ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸಭಾಂಗಣದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
- ಏ.5ರಂದು ಡಾ.ಬಾಬು ಜಗಜೀವನ ರಾಮ್ ಜಯಂತಿ
- ತಹಸೀಲ್ದಾರ್ ಶ್ರೀನಿವಾಸ್
ಎಚ್.ಡಿ.ಕೋಟೆ: ಸರ್ಕಾರದ ಮಾರ್ಗಸೂಚಿಯಂತೆ ತಾಲೂಕು ಆಡಳಿತ ವತಿಯಿಂದ ಏ.5ರಂದು ಡಾ.ಬಾಬು ಜಗಜೀವನ ರಾಮ್ ಜಯಂತಿಯನ್ನು ಸರಳ, ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ ಸಂಬಂಧ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಯಂತಿಯನ್ನು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಚರಣೆ ಮಾಡುವುದರಿಂದ ತಾಲೂಕಿನ ಎಲ್ಲ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದರು.
ತಾಲೂಕಿನಲ್ಲಿ ಮಹನೀಯರ ಜಯಂತಿ ಆಚರಿಸುವ ಸಂದರ್ಭದಲ್ಲಿ ಅವರ ಕೊಡುಗೆಗಳು ಪ್ರತಿಯೊಬ್ಬರಿಗೂ ತಿಳಿದಿರಬೇಕು. ಅದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಅಲ್ಲದೆ ಪ್ರತಿಯೊಬ್ಬ ರಾಷ್ಟ್ರ ನಾಯಕರ ಜಯಂತಿ ಪೂರ್ವಭಾವಿ ಸಭೆ ಹಾಗೂ ಅವರ ಕಾರ್ಯಕ್ರಮದಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕು. ಅವರು ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಪ್ರತಿಯೊಬ್ಬರಲ್ಲೂ ಬರಬೇಕು ಎಂದರು.
ತಾಲೂಕು ಮಟ್ಟದ ಅಧಿಕಾರಿಗಳು ತುರ್ತು ಕೆಲಸ ಸಂದರ್ಭದಲ್ಲಿ ಬಿಟ್ಟು ಇನ್ನುಳಿದ ಸಂದರ್ಭದಲ್ಲಿ ಸಭೆಗಳಲ್ಲಿ ಭಾಗವಹಿಸುವ ಕೆಲಸ ಆಗಬೇಕು. ಸಭೆಗೆ ಬರದೆ ಇರುವ ಅಧಿಕಾರಿಗಳಿಗೆ ಎಷ್ಟು ಅಂತ ನೋಟಿಸ್ ನೀಡುವುದು ತಿಳಿಯದು. ಶಾಸಕರೂ ಕೂಡ ಸಭೆಗೆ ಬರದ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ತುರ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗುತ್ತದೆ. ಮುಂದಿನ ಸಭೆಗಳಿಗೆ ಗೈರಾಗದೆ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಾಬು ಜಗಜೀವನರಾಮ್ ವಿಚಾರ ವೇದಿಕೆ ತಾಲೂಕು ಅಧ್ಯಕ್ಷ ಕೊತ್ತೇಗಾಲ ತಿಮ್ಮಯ್ಯ ಮಾತನಾಡಿ. ಬಾಬೂಜಿ ಜಯಂತಿ ಎಂದರೆ ಅಧಿಕಾರಿಗಳು ಸಭೆಗೆ ಬರುತ್ತಿಲ್ಲ. ಜತೆಗೆ ಬೇರೆ ಸಮುದಾಯದ ಮುಖಂಡರನ್ನು ಪೂರ್ವಭಾವಿ ಸಭೆಗೆ ಆಹ್ವಾನ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಬಾರಿ ತಾಲೂಕಿನಲ್ಲಿ ಬಾಬೂಜಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ಶಾಸಕರ ಸಮ್ಮುಖದಲ್ಲಿ ಸಭೆ ಕರೆಯುವಂತೆ ತಹಸೀಲ್ದಾರ್ ಶ್ರೀನಿವಾಸ್ ಅವರಿಗೆ ಮನವಿ ಮಾಡಿದರು.
ಸಭೆಯಲ್ಲಿ ಬಾಬು ಜಗಜೀವನ ರಾಮ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು, ಆದಿಕರ್ನಾಟಕ ಮಹಸಾಭಾದ ಹೈರಿಗೆ ಶಿವರಾಜು, ಮುಖಂಡರಾದ ಶಿವಯ್ಯ, ಜವರಯ್ಯ, ಕಾಳಪ್ಪಾಜಿ, ಚೇತನ್, ಡಿ.ನಾಗರಾಜು, ಶಿವಾಜಿ, ವೆಂಕಟೇಶ್, ಸುಭಾಷ್, ದೇವನಾಥ್, ಮೊಳೆಯೂರು ನಾಗರಾಜು, ತಿಮ್ಮರಾಜು, ಸಬ್ ಇನ್‌ಸ್ಪೆಪೆಕ್ಟರ್ ಸುರೇಶ್‌ನಾಯಕ, ಬಿಇಒ ಎನ್.ಸಿ ರಾಜು, ಅಧಿಕಾರಿಗಳಾದ ಗೋವಿಂದ ನಾಯಕ, ರಮೇಶ್, ನೇತ್ರಾವತಿ, ಹರ್ಷಿತಾ, ಪ್ರಸಾದ್ ಇದ್ದರು.