ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ವಿನಯ್ ರಾಜಕುಮಾರ್ ಚಾಲನೆ ನೀಡಿದರು. ಸೀಮಾ ಲಾಟ್ಕರ್, ಸುಂದರ್‌ರಾಜ್, ಡಾ.ಹರ್ಷಾ ಪ್ರಿಯಂವದ, ಎ.ಮಾರುತಿ, ಸಿದ್ಧನಗೌಡ ಪಾಟೀಲ್, ಡಾ.ಶಂಕರ್, ಶಿವಶಂಕರ್ ಇತರರು ಇದ್ದರು.
- ಹಲವು ಚಿತ್ರಗಳ ಮೂಲಕ ಮದ್ಯ ಸೇವನೆ ಹಾಗೂ ಮಾದಕ ವಸ್ತು ಸೇವನೆಗಳಿಂದಾಗುವ ದುಷ್ಪರಿಣಾಮ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ
- ಮಾದಕ ವಸ್ತು ಎಂಬುದು ಸಾಮಾಜಿಕ ಪಿಡುಗಾಗಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಹೋರಾಟ ನಡೆಸುತ್ತಿದೆ
ಮೈಸೂರು:ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ನಗರದಲ್ಲಿ ಪೊಲೀಸ್ ಇಲಾಖೆಯಿಂದ ಜಾಗೃತಿ ಜಾಥಾ ನಡೆಸಲಾಯಿತು.
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಆಯೋಜಿಸಿದ್ದ ಜಾಥಾಕ್ಕೆ ನಟ ವಿನಯ್ ರಾಜಕುಮಾರ್ ಚಾಲನೆ ನೀಡಿ ಮಾತನಾಡಿ, ಇಂದಿನ ಯುವ ಜನಾಂಗ ಮಾದಕ ವಸ್ತು ಸೇವನೆಗೆ ದಾಸರಾಗುತ್ತಿರುವುದು ಅಪಾಯಕಾರಿ ಸಂಗತಿ. ಈ ಕುರಿತು ಜಾಗೃತಿ ಮೂಡಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ನಮ್ಮ ತಾತ ಡಾ.ರಾಜ್‌ಕುಮಾರ್ ಅವರು ಹಲವು ಚಿತ್ರಗಳ ಮೂಲಕ ಮದ್ಯ ಸೇವನೆ ಹಾಗೂ ಮಾದಕ ವಸ್ತು ಸೇವನೆಗಳಿಂದಾಗುವ ದುಷ್ಪರಿಣಾಮ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಮಾದಕ ವಸ್ತು ಎಂಬುದು ಸಾಮಾಜಿಕ ಪಿಡುಗಾಗಿದೆ. ಇದರ ವಿರುದ್ಧ ಪೊಲೀಸ್ ಇಲಾಖೆ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಈ ಕೆಲಸಕ್ಕೆ ಸಾರ್ವಜನಿಕರು ಕೈಜೋಡಿಸುವ ಮೂಲಕ ಸಮಾಜವನ್ನು ಡ್ರಗ್ಸ್ ಮುಕ್ತ ಮಾಡಲು ಸಹಕರಿಸಬೇಕು ಎಂದರು.
ಡಿಸಿಪಿಗಳಾದ ಸುಂದರ್‌ರಾಜ್, ಡಾ.ಹರ್ಷಾ ಪ್ರಿಯಂವದ, ವಿವಿಧ ಅಧಿಕಾರಿಗಳಾದ ಎ.ಮಾರುತಿ, ಸಿದ್ಧನಗೌಡ ಪಾಟೀಲ್, ಡಾ.ಶಂಕರ್, ಶಿವಶಂಕರ್ ಇತರರು ಇದ್ದರು.
ಮಾದಕ ವಸ್ತುಗಳ ವಿರುದ್ಧ ವಿವಿಧ ಘೋಷ ವಾಕ್ಯ ಫಲಕ ಹಿಡಿದ ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ನರ್ಸಿಂಗ್ ವಿದ್ಯಾರ್ಥಿಗಳು, ಸಂಚಾರಿ ಪೊಲೀಸರು, ಮಹಿಳಾ ಪೊಲೀಸರು, ಕಮಾಂಡೋಗಳು, ಸಿಎಆರ್ ತಂಡ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ತಂಡಗಳು ಸಾಗಿದವು.
ಜಾಥಾವು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಆಯುರ್ವೇದ ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ನೆಹರು ವೃತ್ತ, ಅಶೋಕ ರಸ್ತೆ ಮೂಲಕ ಸಾಗಿ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಸಮಾಪ್ತಿಗೊಂಡಿತು.