ಮೈಸೂರಿನ ಸೇಂಟ್ ಮರಿಯಾ ಡಿ ಮ್ಯಾಟಿಯಾಸ್ ಶಾಲೆ ಹಾಗೂ ಹಾರ್ಟ್ ಸಂಸ್ಥೆಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಅಣಬೆ ಕೃಷಿ ಮತ್ತು ಅಣಬೆಯ ಮಹತ್ವ ಕುರಿತು ಪರಿಚಯಾತ್ಮಕ ಹಾಗೂ ಜಾಗೃತಿ ಕಾರ್ಯಾಗಾರವನ್ನು ಹಾರ್ಟ್ ಸಂಸ್ಥೆ ಅಧ್ಯಕ್ಷ ಶಿವಕುಮಾರ್ ಉದ್ಘಾಟಿಸಿದರು. ಶಿವಲಿಂಗ, ಶಿಕ್ಷಕ ವೃಂದ ಇದ್ದರು. 
ಮೈಸೂರು

ಅಣಬೆಯ ಮಹತ್ವ ಪರಿಚಯಾತ್ಮಕ ಕಾರ್ಯಾಗಾರ

ಎ. ಆರ್. ರಘುರಾಮ
ಸರಗೂರು : ವಿದ್ಯಾರ್ಥಿಗಳು ಕೃಷಿಯ ಮಹತ್ವ ಅರಿಯಬೇಕು ಎಂದು ಹಾರ್ಟ್ ಸಂಸ್ಥೆ ಅಧ್ಯಕ್ಷ ಸರಗೂರು ಶಿವಕುಮಾರ ತಿಳಿಸಿದರು.
ಮೈಸೂರಿನ ಸೇಂಟ್ ಮರಿಯಾ ಡಿ ಮ್ಯಾಟಿಯಾಸ್ ಶಾಲೆಯಲ್ಲಿ ಹಾಗೂ ಹಾರ್ಟ್ ಸಂಸ್ಥೆ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಅಣಬೆ ಕೃಷಿ ಮತ್ತು ಅಣಬೆಯ ಮಹತ್ವ ಕುರಿತು ಪರಿಚಯಾತ್ಮಕ ಹಾಗೂ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕೃಷಿಯ ಜ್ಞಾನ ಮತ್ತು ಅದರ ಮಹತ್ವವನ್ನು ಅರಿತುಕೊಳ್ಳುವುದು ಅತ್ಯಗತ್ಯ. ಕೃಷಿಯು ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅಣಬೆ ಕೃಷಿಯಂತಹ ವೈಜ್ಞಾನಿಕ ಹಾಗೂ ಲಾಭದಾಯಕ ಕೃಷಿ ಪದ್ಧತಿಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಲೆಯಲ್ಲಿ ಶಿಕ್ಷಣ ಪಡೆದ ಎಲ್ಲರೂ ಕೆಎಎಸ್, ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳಾಗಲು ಸಾಧ್ಯವಿಲ್ಲ. ಆದ್ದರಿಂದ ಕೌಶಲಾಧಾರಿತ ತರಬೇತಿಗಳನ್ನು ಪಡೆದು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿ ಉದ್ಯಮಿಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಈಗಿನಿಂದಲೇ ಇಂತಹ ಕೌಶಲಗಳನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಮಿನಿ, ಸಾಮಾನ್ಯ ಶಿಕ್ಷಣದ ಜತೆಗೆ ಮಕ್ಕಳಿಗೆ ಕೌಶಲಾಧಾರಿತ ತರಬೇತಿಗಳನ್ನು ನೀಡುವ ಮೂಲಕ ಸ್ವಯಂ ಉದ್ಯೋಗದತ್ತ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಪ್ರಸನ್ನ ಅವರು ಅಣಬೆಯ ಪೌಷ್ಟಿಕಾಂಶ, ಆರೋಗ್ಯದಲ್ಲಿ ಅದರ ಪಾತ್ರ, ಅಣಬೆ ಬೆಳೆಯುವ ವಿಧಾನ, ನಿರ್ವಹಣೆ ಹಾಗೂ ಉದ್ಯಮಶೀಲತೆಯ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಅಣಬೆ ಕೃಷಿಯು ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ತಂದುಕೊಡುವ ಸ್ವಯಂ ಉದ್ಯೋಗದ ಮಾರ್ಗವಾಗಿದ್ದು, ಪೌಷ್ಟಿಕ ಆಹಾರವೂ ಆಗಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಅಣಬೆ ಕೃಷಿಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಹಾರ್ಟ್ ಸಂಸ್ಥೆಯ ಸಂಯೋಜಕ ಶಿವಲಿಂಗ, ಶಾಲೆಯ ಶಿಕ್ಷಕ ವೃಂದ ಹಾಗೂ ಸುಮಾರು 120 ವಿದ್ಯಾರ್ಥಿಗಳು ಭಾಗವಹಿಸಿದ್ದರು.