ವಿಜಯನಗರದ ಡಾ.ವಸಂತಕುಮಾರ್ ತಿಮಕಾಪುರ ಅವರ ಮನೆಯಲ್ಲಿ ಗ್ರಂಥಾಲಯವನ್ನು ಗಣ್ಯರು ಉದ್ಘಾಟಿಸಿದರು. ಮಾನಸ, ಪ್ರೊ.ಕಾಳೇಗೌಡ ನಾಗವಾರ, ಎಚ್.ಎಂ.ವಸಂತಮ್ಮ, ಅಂಶಿ ಪ್ರಸನ್ನಕುಮಾರ್ ಇತರರಿದ್ದರು. 
ಮೈಸೂರು

ಪುಸ್ತಕ ಓದುಗರಿಗೆ ಪ್ರಶಸ್ತಿಯ ಗೌರವ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಪ್ರಾಧಿಕಾರದ ಅಧ್ಯಕ್ಷ ಮಾನಸ ಮಾಹಿತಿ
  • ಮೈಸೂರಲ್ಲಿ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ
ಮೈಸೂರು: ‘ನನ್ನ ಪುಸ್ತಕ ನನ್ನ ಹೆಮ್ಮೆ’ ಎಂಬಂತೆ ಪುಸ್ತಕ ಪ್ರೀತಿಯನ್ನು ಗೌರವಿಸಲು ಪ್ರಾಧಿಕಾರದಿಂದ ಮೊದಲ ಬಾರಿಗೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲೂ ತಲಾ ಒಬ್ಬ ಓದುಗರಿಗೆ ಈ ವರ್ಷದಿಂದಲೇ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.
ವಿಜಯನಗರದಲ್ಲಿರುವ ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ ಅವರ ನಿವಾಸದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಶನಿವಾರ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುಸ್ತಕಗಳು ಬದುಕುವ ದಿಕ್ಕು ತೋರಿಸುತ್ತವೆ ಎಂದು ಹೇಳಿದ್ದರು. ಪುಸ್ತಕಗಳು ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಮೊಬೈಲ್ ಬಂದ ನಂತರ ಹಸ್ತ ಖಾಲಿಯಾಗಿತ್ತು. ಈ ಕೊರತೆ ನೀಗಿಸಲು ’ಮಸ್ತಕ’ಕ್ಕೆ ಕೆಲಸ ಕೊಡಲು ಮನೆಗೊಂದು ಗ್ರಂಥಾಲಯ ಯೋಜನೆ ರೂಪಿಸಲಾಗಿದೆ ಎಂದರು.
ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಪುಸ್ತಕ, ಸಾಹಿತ್ಯ ಕುರಿತು ಸಮಾಲೋಚನೆ ನಡೆಸುವ ಮೂಲಕ ಜ್ಞಾನಸಂಪತ್ತನ್ನು ವೃದ್ಧಿಸಿಕೊಳ್ಳಬೇಕಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಮನೆಗೊಂದು ಗ್ರಂಥಾಲಯದ ಮೂಲಕ ಸಾಹಿತ್ಯ, ಪುಸ್ತಕಗಳ ಬಗ್ಗೆ ಚರ್ಚೆಯಾಗುವಂತೆ ಮಾಡಿದೆ. ಈ ರೀತಿ ಸಮಾನಮನಸ್ಕರು, ಸದಭಿರುಚಿ ಇರುವವರು, ಹಿರಿಯ ನಾಗರಿಕರು ಒಂದೆಡೆ ಸೇರಿ ಸಾಹಿತ್ಯ ಬಗ್ಗೆ ಸಮಾಲೋಚಿಸಬೇಕು ಎಂದರು.
ಈ ಹಿಂದೆ ಪ್ರೊ.ಎಂ.ಡಿ. ನಂಜುಂಡಸ್ವಾಮಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ ಮೊದಲಾದವರು ಒಂದೆಡೆ ಸೇರಿದಾಗ ಸಾಹಿತ್ಯದ ಬಗ್ಗೆ ಚರ್ಚೆಯಾಗುತ್ತಿತ್ತು. ಜತೆಗೆ, ‘ಮನುಷ್ಯಜಾತಿ ತಾನೊಂದೆ ವಲಂ’ ಎಂಬ ಮಾತಿನ ಬಗ್ಗೆ ಕೇರಳ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಉತ್ತಮ ಅಭಿಪ್ರಾಯವಿದೆ. ಅದು ಪಾಲನೆ ಆಗಬೇಕು. ಬಸವ, ಅಲ್ಲಮಪ್ರಭು, ಅಕ್ಕಮಹಾದೇವಿ ಅವರಂಥ ವಚನಕಾರರು ಹೇಳಿದ್ದು ಇದನ್ನೇ ಎಂದರು.
ನಿವೃತ್ತ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಎಚ್.ಎಂ.ವಸಂತಮ್ಮ ಮಾತನಾಡಿ, ಪ್ರತಿಯೊಬ್ಬರಲ್ಲೂ ಪುಸ್ತಕ ಪ್ರೀತಿಸಬೇಕು. ಯುವಪೀಳಿಗೆ ಪುಸ್ತಕ ಓದುವಂತೆ ಮಾಡಬೇಕು ಎಂದರು.
ಡಾ.ವಸಂತಕುಮಾರ್ ತಿಮಕಾಪುರ ಮಾತನಾಡಿ, ನನ್ನನ್ನು ಪುಸ್ತಕ ಪ್ರೀತಿಯೇ ಇಲ್ಲಿಯವರೆಗೆ ಕರೆತಂದು ನಿಲ್ಲಿಸಿದೆ. ಇದರಿಂದಾಗಿಯೇ ಕೃಷಿ ಸಾಹಿತ್ಯದ ಬಗ್ಗೆ ಪುಸ್ತಕಗಳನ್ನು ಬರೆಯಲು ಸಾಧ್ಯವಾಗಿದೆ ಎಂದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಎಂ.ಚಂದ್ರಶೇಖರ್, ಸದಸ್ಯ ದೇವರಾಜ ಪಿ.ಚಿಕ್ಕಹಳ್ಳಿ, ಮೈ.ನಾ. ಲೋಕೇಶ್, ಡಾ.ಎಚ್.ಎಲ್.ವಸಂತಕುಮಾರ್, ಪ್ರೊ.ಆರ್.ಎನ್.ಪದ್ಮನಾಭ, ಡಾ.ಮಹದೇವಸ್ವಾಮಿ, ಪ್ರೊ.ಪ್ರಭಾಕರ್, ಸಿ.ವಿ. ಗುಪ್ತ  ಪಾಲ್ಗೊಂಡಿದ್ದರು. ಮಾಜಿ ಮೇಯರ್ ಮೋದಾಮಣಿ ವಚನ ಗಾಯನ ಪ್ರಸ್ತುತಪಡಿಸಿದರು.