ಎಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಂಬಾಕು ವಿರೋಧಿ ದಿನ ಆಚರಿಸಲಾಯಿತು. ವಿಜಯ್ ಕುಮಾರ್ ನಾಗನಾಳ, ನಾಗಣ್ಣ, ವೇಣುಗೋಪಾಲ್, ಶಿವರಾಜು, ಗುಣಶ್ರೀ ಇದ್ದರು.  
ಮೈಸೂರು

ತಂಬಾಕು ಸೇವನೆಯಿಂದ ದೂರವಿರಿ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯ್ ಕುಮಾರ ನಾಗನಾಳ ಸಲಹೆ
ಎಚ್.ಡಿ.ಕೋಟೆ: ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಚ್.ಡಿ. ಕೋಟೆ ವಲಯದ ವತಿಯಿಂದ ಮಂಗಳವಾರ ತಂಬಾಕು ವಿರೋಧಿ ದಿನವನ್ನು ಆಚರಿಸಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯ್ ಕುಮಾರ ನಾಗನಾಳ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯರೋಗ, ಶ್ವಾಸಕೋಶದ ಕಾಯಿಲೆ ಸೇರಿದಂತೆ ಅನೇಕ ಗಂಭೀರ ರೋಗಗಳು ಉಂಟಾಗುತ್ತವೆ. ವಿದ್ಯಾರ್ಥಿಗಳು ಮತ್ತು ಯುವಜನರ ಭವಿಷ್ಯವನ್ನು ಹಾಳು ಮಾಡುತ್ತದೆ. ಕುಟುಂಬದ ಆರ್ಥಿಕ ಸ್ಥಿತಿ ಮತ್ತು ಸದಸ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ತಿಳಿಸಿದರು.
ತಂಬಾಕು ಖರೀದಿಸಲು ಖರ್ಚಾಗುವ ಹಣವನ್ನು ಶಿಕ್ಷಣ, ಆರೋಗ್ಯ ಮತ್ತು ಕುಟುಂಬದ ಅಭಿವೃದ್ಧಿಗೆ ಬಳಸಬಹುದು. ಸಂತೋಷದ ಜೀವನ ಮತ್ತು ಸಮಾಜದ ಅಭಿವೃದ್ಧಿಗಾಗಿ ತಂಬಾಕು ಸೇವನೆಯಿಂದ ದೂರವಿರಬೇಕು. ತಂಬಾಕು ನಿಯಂತ್ರಣಕ್ಕಾಗಿ ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಸಾಕಷ್ಟು ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರದ ಅಗತ್ಯ ಎಂದು ತಿಳಿಸಿದರು.
ವ್ಯೆದ್ಯಾಧಿಕಾರಿ ಡಾ. ಶರಣಬಸವ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಬರುತ್ತವೆ. ಗುಟ್ಕಾ, ಸಿಗರೇಟ್, ಕಡ್ಡಿಪುಡಿ ಇಂತಹ ವಸ್ತುಗಳಿಂದ ಯುವಜನತೆ ದೂರ ಇರಬೇಕು ಎಂದು ಸಲಹೆ ನೀಡಿದರು.
ತಾಲೂಕು ಯೋಜನಾಧಿಕಾರಿ ವೇಣುಗೋಪಾಲ್, ಜಿಲ್ಲಾ ಜನಜಾಗೃತಿ ಸದಸ್ಯರಾದ ಶಿವರಾಜು, ನಾಗಣ್ಣ, ವಲಯ ಮೇಲ್ವಿಚಾರಕಿ ಗುಣಶ್ರೀ, ಹಾಲಮ್ಮ, ವಿನುತಾ, ಎಂ.ಮಂಜುಳಾ , ಬಾನುಮತಿ ಉಪಸ್ಥಿತರಿದ್ದರು.