ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕೊಪ್ಪ ಆಟೋ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು. 
ಮೈಸೂರು

ಕೊಪ್ಪದಲ್ಲಿ ಆಟೋ ಚಾಲಕರ ಪ್ರತಿಭಟನೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಡಾಂಬರೀಕರಣ ಕಳಪೆ ಎಂದು ಆರೋಪ
ಬೈಲುಕುಪ್ಪೆ: ರಸ್ತೆ ಡಾಂಬರೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಕೊಪ್ಪ ಆಟೋ ಚಾಲಕರು ಸೋಮವಾರ ಪ್ರತಿಭಟನೆ ನಡೆಸಿದರು.
ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಲ್ಡನ್ ಟೆಂಪಲ್ ಕಡೆಗೆ ಹೋಗುವ ಮುಖ್ಯರಸ್ತೆ ಗುಂಡಿಮಯವಾಗಿತ್ತು. ಸಾರ್ವಜನಿಕರ ದೂರಿನ ಮೇರೆಗೆ ಸಚಿವ ಕೆ.ವೆಂಕಟೇಶ್ ಅವರು ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದ್ದರು.
ನಿಯಮನುಸಾರ ಗುತ್ತಿಗೆದಾರ 1.2 ಕಿಲೋ ಮಿಟರ್ ರಸ್ತೆ ಕಾಮಗಾರಿ ಮಾಡುತ್ತಿದ್ದು, ಅಂದಾಜು 80 ಲಕ್ಷ ರೂ.ಅನುದಾನವನ್ನು ಎರಡು ವಿಭಾಗ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ಒಂದು ವಿಭಾಗದಲ್ಲಿ ಭಾನುವಾರದಿಂದ ಡಾಂಬರ್ ಹಾಕಲು ಪ್ರಾರಂಭಿಸಿದ್ದಾರೆ. ಇನ್ನೂ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ, ಗೋಲ್ಡನ್ ಟೆಂಪಲ್ ಕಡೆ ಹೋಗುವ ಮುಖ್ಯ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಬ್ಯಾರಿಕೇಡ್ ಅಡ್ಡ ಹಾಕಿ ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದ ಬೈಲುಕುಪ್ಪೆ ಪಿಎಸ್‌ಐ ರವಿಕುಮಾರ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಮಾಡುವುದು ಬೇಡ, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸುತ್ತೇನೆ. ಅವರೊಟ್ಟಿಗೆ ಚರ್ಚಿಸಿ ಎಂದು ಹೇಳಿದ್ದರಿಂದ ಪ್ರತಿಭಟನೆಯನ್ನು ಹಿಂಪಡೆದರು.
ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಎಇಇ ಎಂ.ಆರ್.ವೆಂಕಟೇಶ್, ಇಂಜಿನಿಯರ್ ಕುಮಾರ್ ಸ್ಥಳಕ್ಕೆ ಆಗಮಿಸಿ ಆಟೋ ಚಾಲಕರ ರೊಂದಿಗೆ ಚರ್ಚಿಸಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಭಾನುವಾರ ಗುತ್ತಿಗೆದಾರ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಇನ್ನೂ 15 ದಿನಕ್ಕೂ ಹೆಚ್ಚು ಕಾಲಾವಕಾಶ ಬೇಕಾಗುತ್ತದೆ. ನಂತರ ಪರಿಶೀಲಿಸಿ. ಕಳಪೆ ಕಾಮಗಾರಿ ನಡೆದಿದ್ದರೆ. ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಆಟೋ ಚಾಲಕರಾದ ರವಿ, ಮಹೇಶ್, ರಮೇಶ್, ಹರೀಶ, ಗಿರೀಶ, ರಾಜು, ರಜಾಕ್, ವಿಜಿ, ವಿನು ಇತರರು ಇದ್ದರು