ಆಟಿಸಂ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಾಕಥಾನ್ ನಡೆಯಿತು. ಶುಭಾ ಅರಸು, ಕಿಶೋರ್ ಬಿದ್ದಪ್ಪ, ಬೋಪಣ್ಣ, ಸಂಗೀತಾ, ಬಲ್ಲಚಂಡ ಧನ್ಯ ಉತ್ತಪ್ಪ ಮತ್ತು ಕೋಟೇರ ದಿಲೀಪ್ ದೇವಯ್ಯ ಇನ್ನಿತರರಿದ್ದರು. 
ಮೈಸೂರು

‘ಆಟಿಸಂ’ ಜಾಗೃತಿ ಅಭಿಯಾನ, ವಾಕಥಾನ್

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಆಟಿಸಂ ಹೊಂದಿರುವ ವ್ಯಕ್ತಿಗಳ ಬಗ್ಗೆ ಗೌರವ, ಸ್ವೀಕಾರ ಮತ್ತು ಬೆಂಬಲದ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶ
ಮೈಸೂರು: ಆಟಿಸಂ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಅಂಗವಾಗಿ ನಗರದಲ್ಲಿ ಭಾನುವಾರ ವಾಕಥಾನ್ ಏರ್ಪಡಿಸಲಾಗಿತ್ತು. 
ಆಟಿಸಂ ಹೊಂದಿರುವ ವ್ಯಕ್ತಿಗಳ ಬಗ್ಗೆ ಗೌರವ, ಸ್ವೀಕಾರ ಮತ್ತು ಬೆಂಬಲದ ಮನೋಭಾವ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. 
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭವಾದ ನಡಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಓವಲ್ ಮೈದಾನದಲ್ಲಿ ಸಮಾರೋಪಗೊಂಡಿತು. ವಿವಿಧ ವಯೋಮಾನದ ನಾಗರಿಕರು, ಪಾಲಕರು, ವಿದ್ಯಾರ್ಥಿಗಳು ಹಾಗೂ ಸ್ವಯಂ ಸೇವಕರು ಉತ್ಸಾಹದಿಂದ ಪಾಲ್ಗೊಂಡು ಒಳಗೊಳ್ಳುವಿಕೆಯ ಸಮಾಜ ಎಂಬ ಸಂದೇಶವನ್ನು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶುಭಾ ಅರಸು, ಕಿಶೋರ್ ಬಿದ್ದಪ್ಪ ಹಾಗೂ ಬೋಪಣ್ಣ ಅವರು, ಆಟಿಸಂ ಒಂದು ರೋಗವಲ್ಲ, ಅದು ಪ್ರಪಂಚವನ್ನು ನೋಡುವ ವಿಭಿನ್ನ ದೃಷ್ಟಿಕೋನ. ಇಂತಹ ವ್ಯಕ್ತಿಗಳನ್ನು ಅರ್ಥೈಸಿಕೊಳ್ಳುವುದು ಮತ್ತು ಅವರಿಗೆ ಪ್ರೀತಿ ಹಾಗೂ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ. ಸಮಾಜದಲ್ಲಿ ಅಜ್ಞಾನದಿಂದ ಉಂಟಾಗುವ ತಪ್ಪು ಕಲ್ಪನೆ ನಿವಾರಿಸುವ ಅಗತ್ಯವಿದೆ ಎಂದು ಹೇಳಿದರು.
ಈ ಜಾಗೃತಿ ಅಭಿಯಾನವನ್ನು ಪಾದ ಟ್ರಸ್ಟಿ ಸಂಗೀತಾ, ಬಲ್ಲಚಂಡ ಧನ್ಯಾ ಉತ್ತಪ್ಪ ಮತ್ತು ಕೋಟೇರ ದಿಲೀಪ್ ದೇವಯ್ಯ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪ್ರಾಜೆಕ್ಟ್ ರೀಚ್ ಔಟ್ ತಂಡದ ಸ್ವಯಂ ಸೇವಕರು ಕಾರ್ಯಕ್ರಮದ ನಿರ್ವಹಣೆ ಮಾಡಿದರು.