ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಮೈಸೂರು ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ವಿಷಯಾಧಾರಿತ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಉದ್ಘಾಟಿಸಿದರು. ಗುರುಪ್ರಸಾದ್ ಬಂಗೇರ, ಆರ್.ಎಸ್. ಸುರೇಶ್, ಸೋಮಯಾಜಿ ಹಾಗೂ ಇತರರು ಇದ್ದರು.
ಮೈಸೂರು: ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್, ಸಾಕಷ್ಟು ಸಹಕಾರಿಗಳಿಗೆ ನೂತನ ಕಾಯ್ದೆಗಳ ಕುರಿತು ತಿಳಿದಿರುವುದಿಲ್ಲ. ಹಾಗಾಗಿ ತರಬೇತಿ ಮೂಲಕ ಅವರಿಗೆ ಸಂಪೂರ್ಣ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಈ ಹಿಂದೆ 2000 ಸಾವಿರ ಸಿಬ್ಬಂದಿ ಇದ್ದರು. ಆದರೆ, ಈ ಸಂಖ್ಯೆ ಇದೀಗ 450ಕ್ಕೆ ಇಳಿಕೆಯಾಗಿದೆ. ಹೀಗಾಗಿ ಸಹಕಾರ ಸಂಘಗಳ ಆಡಿಟ್ ಸರಿಯಾಗಿ ನಡೆಯುತ್ತಿಲ್ಲ. ಸಹಕಾರ ಸಂಘಗಳು ಪ್ರತಿ ಮೂರು ವರ್ಷಗಳಿಗೊಮ್ಮೆ ಲೆಕ್ಕ ಪರಿಶೋಧನಾ ಇಲಾಖೆ ಮೂಲಕ ಆಡಿಟ್ ಮಾಡಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, 17 ಸಾವಿರ ಸಂಸ್ಥೆಗಳ ಆಡಿಟ್‌ಅನ್ನು 450 ಜನರು ಮಾಡಲು ಸಾಧ್ಯವೇ? ಈ ಕುರಿತು ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ವೃತ್ತಿಪರ ನಿರ್ದೇಶಕ ಬಿ. ಮಹದೇವಸ್ವಾಮಿ, ಪ್ರಾಂತೀಯ ಅಧ್ಯಕ್ಷ ಗುರುಪ್ರಸಾದ್ ಬಂಗೇರ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ಆರ್.ಎಸ್. ಸುರೇಶ್, ಉಡುಪಿಯ ಸಾಲಿಗ್ರಾಮದ ಗುರುನರಸಿಂಹ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಸೋಮಯಾಜಿ ಹಾಗೂ ಇತರರು ಇದ್ದರು.