ಗೌರಿಶಂಕರ ನಗರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದ ಸಂದರ್ಭ ಗುಂಪುಗೂಡಿದ ಜನರು. 
ಮೈಸೂರು

ಗೌರಿಶಂಕರ ನಗರದಲ್ಲಿ ಮನೆಗಳ ತೆರವಿಗೆ ಯತ್ನ

ಮೈಸೂರು: ಚಾಮುಂಡಿಬೆಟ್ಟ ತಪ್ಪಲಿನ ಗೌರಿಶಂಕರ ನಗರದ ನಿವಾಸಿಗಳು ಗವಿಮಠಕ್ಕೆ ಸೇರಿದ ಆಸ್ತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿದ್ದಾರೆ ಎಂಬ ದೂರಿನ ಮೇರೆಗೆ ತಹಶೀಲ್ದಾರ್ ಮಹೇಶ್ ನೇತೃತ್ವದ ತಂಡ ಮಂಗಳವಾರ ಒತ್ತುವರಿ ತೆರವಿಗೆ ಮುಂದಾಯಿತು. ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಯನ್ನು ಕೈಬಿಡಲಾಯಿತು.

ತಾಲೂಕು ಆಡಳಿತ, ನಗರ ಪಾಲಿಕೆ ಅಧಿಕಾರಿಗಳು ಜೆಸಿಬಿ, ಬುಲ್ಡೋಜರ್‌ನೊಂದಿಗೆ ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭ ಸ್ಥಳೀಯರು ತಾಲೂಕು ಆಡಳಿತದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗವಿಮಠದವರು ಹಲವು ವರ್ಷಗಳ ಹಿಂದೆ ಹಲವಾರು ಜನರಿಂದ ಹಣ ಪಡೆದು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ಅದರೆ, ಇಂದಿಗೂ ಆರ್‌ಟಿಸಿಯಲ್ಲಿ ಗವಿಮಠದ ಹೆಸರು ಇದೆ. ಗವಿಮಠದ ಹೆಸರು ಇದೆ ಎಂಬ ಒಂದೇ ಕಾರಣಕ್ಕೆ ಮನೆಗಳನ್ನು ನಿರ್ಮಿಸಿ ವಾಸ ಮಾಡುತ್ತಿರುವ ಜನರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ನಮಗೆ ಗವಿಮಠದವರು ನಿವೇಶನ ನೀಡಿರುವ ಕುರಿತು ದಾಖಲೆಗಳು ಇವೆ. ಈ ದಾಖಲೆಗಳನ್ನು ಪರಿಶೀಲಿಸಿ ನಮಗೆ ಹಕ್ಕುಪತ್ರ ನೀಡಿ ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು. ಈ ಸಂದರ್ಭ ಸ್ಥಳೀಯ ನಿವಾಸಿಗಳ ಬೆಂಬಲಕ್ಕೆ ಹಲವು ಸಂಘ ಸಂಸ್ಥೆಗಳ ಮುಖಂಡರು ಬಂದರು.
ಹಲವಾರು ವರ್ಷಗಳ ಹಿಂದೆಯೇ ಗೌರಿಶಂಕರ ನಗರದಲ್ಲಿ ಮನೆಗಳು ನಿರ್ಮಾಣವಾಗಿದ್ದು, ನಗರ ಪಾಲಿಕೆಯಿಂದ ರಸ್ತೆ, ಯುಜಿಡಿ, ವಿದ್ಯುತ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದೆ. ಇದಕ್ಕೆ ಮಠಕ್ಕೆ ಸಂಬಂಧಪಡದ ಸ್ವಾಮೀಜಿಯೊಬ್ಬರು ನಾನೇ ಸ್ವಾಮೀಜಿ ಎಂದು ಹೇಳಿಕೊಂಡು ಸ್ಥಳೀಯರನ್ನು ಒಕ್ಕಲೆಬ್ಬಿಸಲು ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.