ಕೆ.ಆರ್.ನಗರದ ಮಧುವನಹಳ್ಳಿ ಬಡಾವಣೆಯ 23ನೇ ವಾರ್ಡಿನ ಶ್ರೀ ಚಿಕ್ಕಮ್ಮ ಮತ್ತು ಅಮೃತಮ್ಮ ತಾಯಿಯವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿರುವುದು.
- ಕೆ.ಆರ್.ನಗರ ಪೊಲೀಸರಿಂದ ಸ್ಥಳ ಪರಿಶೀಲನೆ
ಕೆ.ಆರ್.ನಗರ: ಬುಧವಾರ ತಡರಾತ್ರಿ ಒಂದೇ ಬಡಾವಣೆಯಲ್ಲಿ ಖದೀಮರು ಮನೆಯ ಬಾಗಿಲು ಹಾಗೂ ದೇವಸ್ಥಾನದ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪಟ್ಟಣದ ಮಧುವನಹಳ್ಳಿ ಬಡಾವಣೆಯ 23ನೇ ವಾರ್ಡ್ ನಿವಾಸಿ ಮಾದೇಗೌಡ(ಸುಬ್ಬಣ್ಣ) ಅವರ ಮನೆಗೆ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಅಕ್ಕ ಪಕ್ಕದ ಮನೆಗಳಿಗೆ ಹೊರಗಿನಿಂದ ಚಿಲಕಹಾಕಿ ನಂತರ ಮಾದೇಗೌಡರ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿದ್ದಾರೆ. ನಂತರ ಬೀರುವನ್ನು ಒಡೆದಿದ್ದು, ಬೆಲೆ ಬಾಳುವ ವಸ್ತುಗಳು ಸಿಗದ ಹಿನ್ನೆಲೆಯಲ್ಲಿ ಕೈಗೆ ಸಿಕ್ಕ ಕೆಲವು ಕಾಗದ ಪತ್ರಗಳನ್ನು ಮನೆಯ ಹೊರಗೆ ಎಸೆದು ಪರಾರಿಯಾಗಿದ್ದಾರೆ.
ನೆರೆಮನೆಯವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಎಸ್.ಶಿವಪ್ರಕಾಶ್ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದರು.
ಅದೇ ರಾತ್ರಿ ಬಡಾವಣೆಯ ಶ್ರೀ ಚಿಕ್ಕಮ್ಮ ಮತ್ತು ಅಮೃತಮ್ಮ ತಾಯಿಯವರ ದೇವಸ್ಥಾನದಲ್ಲೂ ಖದೀಮರು ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಾಗಿಲ ಬೀಗ ಒಡೆದು ಒಳಪ್ರವೇಶಿಸಿದ ಕಳ್ಳರು, ಸಮೀಪದಲ್ಲಿ ಸ್ಥಳೀಯರ ಗದ್ದಲ ಕೇಳಿ ಪರಾರಿಯಾಗಿದ್ದಾರೆ. ನಂತರ ಮುಂಜಾನೆ 5.30ಕ್ಕೆ ಸಮಯದಲ್ಲಿ ದೇವಸ್ಥಾನದ ಬೀಗ ಒಡೆದಿರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿವೆ.