ಕಾರಿನ ಬಾನೆಟ್‌ನಲ್ಲಿ ಸಿಲುಕಿದ ಧನಂಜಯ
ಮೈಸೂರು: ನಿವೇಶನ ಖರೀದಿಗೆ ನೀಡಿದ್ದ ಹಣ ವಾಪಾಸ್ ನೀಡುವಂತೆ ಕೇಳಿದ ವ್ಯಕ್ತಿಯ ಮೇಲೆ ಕಾರು ಹರಿಸಿ ಹತ್ಯೆಗೆ ಯತ್ನಿಸಿದ ಆರೋಪದ ಮೇರೆಗೆ ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ಕುವೆಂಪುನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಿವೇಶನ ಖರೀದಿಗೆ ಗಂಗರಾಜುಗೆ 2024ರಲ್ಲಿ ವಿಜಯನಗರ 4ನೇ ಹಂತದ ನಿವಾಸಿ, ಕಾರ್ಮಿಕ ಎಂ.ಎನ್. ಧನಂಜಯ ಎಂಬವರು 20 ಲಕ್ಷ ರೂ. ನೀಡಿದ್ದರು. ಆದರೆ, ಅವರು ನಿವೇಶನ ನೀಡಿರಲಿಲ್ಲ. ಹೀಗಾಗಿ ಬುಧವಾರ ಹಣ ವಾಪಾಸ್ ನೀಡುವಂತೆ ಧನಂಜಯ ಕೇಳಿದಾಗ ಗಂಗರಾಜು ಕಾರು ಹರಿಸಿ ಹತ್ಯೆಗೆ ಯತ್ನಿಸಿದ್ದರು. ಗಂಗರಾಜು ಕಾರು ಹರಿಸಲು ಯತ್ನಿಸಿದಾಗ ಧನಂಜಯ ಅವರು ಕಾರಿನ ಬಾನೆಟ್ ಹಿಡಿದು ನೇತಾಡುತ್ತಾ 1 ಕಿ.ಮೀ. ವರೆಗೆ ಸಂಚರಿಸಿದರು. ನಂತರ ಸಾರ್ವಜನಿಕರು ಗಂಗರಾಜು ಅವರ ಕಾರನ್ನು ಅಡ್ಡಗಟ್ಟಿ ಧನಂಜಯ ಅವರನ್ನು ಕೆಳಕ್ಕೆ ಇಳಿಸಿದರು.
ಆರ್‌ಟಿಐ ಕಾರ್ಯಕರ್ತ ಗಂಗರಾಜು ಧನಂಜಯ ಅವರಿಗೆ 2024ರಲ್ಲಿ ಮೂಡಾದಲ್ಲಿ ಕೆಲಸ ಮಾಡುತ್ತಿದ್ದ ನಂದೀಶ್ ಎಂಬುವರ ಪರಿಚಯವಾಗಿತ್ತು. ಅವರು ಮೈಸೂರು ನಗರದ ಜೆಪಿ ನಗರದಲ್ಲಿರುವ ಒಂದು ನಿವೇಶನವನ್ನು ಖರೀದಿ ಮಾಡಿಕೊಳ್ಳುವಂತೆ ಸಲಹೆ ನೀಡಿ, ಆರ್‌ಟಿಐ ಕಾರ್ಯಕರ್ತ ಗಂಗರಾಜು ಅವರನ್ನು ಪರಿಚಯ ಮಾಡಿಕೊಟ್ಟಿದ್ದರು. ಬಳಿಕ ಧನಂಜಯ ಗಂಗರಾಜು ಅವರೊಂದಿಗೆ ನಿವೇಶನವನ್ನು ಪರಿಶೀಲಿಸಿದ್ದು, ಸುಮಾರು 8712 ಚದರ ಅಡಿ ವಿಸ್ತೀರ್ಣದ ಆ ಜಾಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಗಂಗರಾಜು ಅವರೇ ನೀಡಿದ್ದರು.
ನಿವೇಶನದ ಮಾಲೀಕರಾದ ಬನ್ನಂತೇಗೌಡರೂ ಸ್ಥಳದಲ್ಲಿದ್ದು, ವ್ಯವಹಾರವನ್ನು ಗಂಗರಾಜು ಅವರ ಜತೆ ನಡೆಸಿಕೊಳ್ಳಿ, ನಾನು ಬಂದು ಸಹಿ ಮಾಡುತ್ತೇನೆ ಎಂದು ಹೇಳಿದ್ದರು. ಚದರ ಅಡಿಗೆ 3,800 ರೂ. ದರ ನಿಗದಿ ಮಾಡಲಾಗಿದ್ದು, 2024ರ ಜೂನ್ ತಿಂಗಳಲ್ಲಿ ಧನಂಜಯ 20 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಗಂಗರಾಜು ಅವರಿಗೆ ಮುಂಗಡವಾಗಿ ನೀಡಿದ್ದರು.
ಹಣ ಸ್ವೀಕರಿಸಿದ ಬಳಿಕ ನಿವೇಶನದ ಟೈಟಲ್ ಡೀಡ್ ಪಡೆದು, ಬನ್ನಂತೇಗೌಡರಿಂದ ನಿಮ್ಮ ಹೆಸರಿಗೆ ನೋಂದಣಿ ಮಾಡಿಕೊಡುವುದಾಗಿ ಗಂಗರಾಜು ಧನಂಜಯ ಅವರಿಗೆ ಭರವಸೆ ನೀಡಿದ್ದರು. ಆದರೆ ಬಳಿಕ ಹಲವು ಬಾರಿ ಸಂಪರ್ಕಿಸಿದರೂ ನೋಂದಣಿ ಮಾಡಿಕೊಡದೇ, ಹಣವನ್ನೂ ವಾಪಾಸ್ ನೀಡದೆ ಸತಾಯಿಸುತ್ತಿದ್ದರು.
ಕಾರ್ಯನಿಮಿತ್ತ ಬುಧವಾರ ಧನಂಜಯ ಮುಡಾ ಕಚೇರಿಗೆ ತೆರಳಿದ್ದ ಸಂದರ್ಭ ಅಲ್ಲಿ ಗಂಗರಾಜು ಅಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಹಣ ವಾಪಸ್ ನೀಡುವಂತೆ ಕೇಳಿದಾಗ, ‘ನಂದೀಶ್‌ಗೆ ಎಲ್ಲ ವಿಚಾರ ತಿಳಿಸಿದ್ದೇನೆ’ ಎಂದು ಗಂಗರಾಜು ಹೇಳಿ ಸ್ಥಳದಿಂದ ನಿರ್ಗಮಿಸಿದರು. ಬಳಿಕ ಆಗಮಿಸಿದ ನಂದೀಶ್ ‘ನಾನು ಸೆಟಲ್ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದ್ದರು.
ಅದೇ ದಿನ ಮಧ್ಯಾಹ್ನ ಸುಮಾರು 3.15ಕ್ಕೆ ರಾಮಕೃಷ್ಣನಗರದ ಉಪನೋಂದಣಾಧಿಕಾರಿ (ದಕ್ಷಿಣ) ಕಚೇರಿ ಬಳಿ ಗಂಗರಾಜು ಅವರ ಕಾರು ನಿಂತಿರುವುದನ್ನು ಗಮನಿಸಿದ ಧನಂಜಯ ಹಣ ವಾಪಾಸ್ ನೀಡುವಂತೆ ಗಂಗರಾಜು ಅವರಲ್ಲಿ ಕೇಳಿದರು. ಈ ಸಂದರ್ಭ ಗಂಗರಾಜು ಕಾರನ್ನು ವೇಗವಾಗಿ ಚಲಾಯಿಸಿ ಧನಂಜಯ ಅವರ ಮೇಲೆ ಹರಿಸಲು ಯತ್ನಿಸಿದರು. ಈ ಕುರಿತು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.