ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್  
ಮೈಸೂರು

ರಾಜ್ಯದಲ್ಲಿ 83 ಲಕ್ಷ ಮತದಾರ ಹೆಸರು ಡಿಲೀಟ್‌ಗೆ ಪ್ರಯತ್ನ : ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪ

ಮೈಸೂರು: ರಾಜ್ಯದಲ್ಲಿ 83 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡುವ ಪ್ರಯತ್ನ ನಡೆಯುತ್ತಿದ್ದು, ರಾಜ್ಯಸರ್ಕಾರ ಎಸ್‌ಐಆರ್ ವಿರುದ್ಧ ಸುಗ್ರೀವಾಜ್ಞೆ ತರಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.
ಮತದಾರರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದ ಬಿಜೆಪಿ ನಾಯಕರು ಮತದಾರರನ್ನು ಮತದಾರರ ಪಟ್ಟಯಿಂದ ಕಿತ್ತುಹಾಕಿ ಆ ಮೂಲಕ ಗೆಲುವು ಸಾಧಿಸಲು ಪ್ರಯತ್ನ ನಡೆಸುತ್ತಿದೆ. ಹರಿಯಾಣದಲ್ಲಿ 65 ಲಕ್ಷ, ಬಿಹಾರದಲ್ಲಿ 85 ಲಕ್ಷ, ಪಶ್ಚಿಮಬಂಗಾಳದಲ್ಲಿ 92 ಲಕ್ಷ ಮತದಾರರನ್ನು ಕೈಬಿಟ್ಟು ಅಧಿಕಾರಕ್ಕೆ ಬಂದರು. ಇದೇ ಪ್ರಯತ್ನವನ್ನು ರಾಜ್ಯದಲ್ಲೂ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ 5.5 ಕೋಟಿ ಮತದಾರರ ಪೈಕಿ ಶೇ.15ರಷ್ಟು ಮತದಾರರನ್ನು ಕೈ ಬಿಡಲಾಗುತ್ತಿದೆ. ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 71 ಸಾವಿರ, ನರಸಿಂಹರಾಜ ಕ್ಷೇತ್ರದಲ್ಲಿ 60 ಸಾವಿರ ಮತದಾರರನ್ನು ಕೈಬಿಡುವುದಕ್ಕೆ ಪ್ರಯತ್ನ ನಡೆದಿದ್ದು, ಇದರಲ್ಲಿ 45 ಸಾವಿರ ಮುಸ್ಲಿಂ ಮತದಾರರು ಇದ್ದಾರೆ ಎಂದರು.
ದೇಶದಲ್ಲಿ ತುರ್ತು ಆರ್ಥಿಕ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರ ಸರ್ಕಾರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗಿದೆ. ಒಂದು ವರ್ಷದ ಮಟ್ಟಿಗೆ ಚಿನ್ನ ಖರೀದಿಸದಂತೆ ಹೇಳಿದ್ದಾರೆ. ವಾಹನ ಬಿಟ್ಟು ಬಸ್, ರೈಲುಗಳಲ್ಲಿ ಓಡಾಡುವಂತೆ ಹೇಳಿರುವುದಕ್ಕೆ ಅಂಧಭಕ್ತರು ಸ್ವಾಗತಿಸುತ್ತಿದ್ದಾರೆ. ಅರ್ಥವ್ಯವಸ್ಥೆಯನ್ನು ಹಾಳು ಮಾಡಿರುವುದನ್ನು ನೋಡಿದರೆ ಮುಂದೆ ದೊಡ್ಡ ಕಂಟಕ ಎದುರಾಗಲಿದೆ ಎಂದು ಹೇಳಿದರು.
ಶೃಂಗೇರಿ ಕ್ಷೇತ್ರದ ಮರು ಎಣಿಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶವು ಸತ್ಯಕ್ಕೆ ಸಂದ ಜಯವಾಗಿದೆ. ಬ್ಯಾಲೆಟ್ ಪೇಪರ್‌ಗಳನ್ನು ತಿದ್ದಲಾಗಿದೆ. ಬಿಜೆಪಿಯ ಕಾರ್ಯಕರ್ತರೇ ತಮ್ಮ ಅಧಿಕಾರ ಉಪಯೋಗಿಸಿಕೊಂಡಿರುವುದು ಗೊತ್ತಾಗಲಿದೆ ಎಂದರು. ನೀಟ್ ಪರೀಕ್ಷೆಯಲ್ಲಿ ದೊಡ್ಡ ಗೋಲ್‌ಮಾಲ್ ನಡೆದಿದೆ. ತಮಿಳುನಾಡು ರಾಜ್ಯದಂತೆ ಕರ್ನಾಟಕದಲ್ಲೂ ನೀಟ್ ಪರೀಕ್ಷೆಯನ್ನು ಬ್ಯಾನ್ ಮಾಡಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದರ ಹಿಂದೆ ದೊಡ್ಡ ವ್ಯಕ್ತಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಜೆ.ವಿಜಯಕುಮಾರ್, ಬಿ.ಎಂ.ರಾಮು, ಎಂ.ಶಿವಣ್ಣ, ಕೆ.ಮಹೇಶ್, ಗಿರೀಶ್ ನಾಯ್ಕ ಇದ್ದರು.