ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಎಂಸಿಡಿಸಿಸಿ) ಇ-ಮೇಲ್ ಹಾಗೂ ಲೆಟರ್‌ಹೆಡ್ ದುರ್ಬಳಕೆ ಮಾಡಿಕೊಂಡು 5.30 ಲಕ್ಷ ರೂ. ಹಣ ದೋಚಲು ನಡೆಸಿದ ಸಂಚು ಬಯಲಾಗಿದೆ.
ಎಂಸಿಡಿಸಿಸಿ ಬ್ಯಾಂಕ್‌ನ ಲೆಟರ್‌ಹೆಡ್ ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ನ ಇ-ಮೇಲ್ ಮೂಲಕ ಜು.14 ರಂದು ಅಪೆಕ್ಸ್ ಬ್ಯಾಂಕ್‌ಗೆ ಮೇಲ್ ಕಳುಹಿಸಲಾಗಿದೆ. ಎಂಸಿಡಿಸಿಸಿ ಬ್ಯಾಂಕಿನ ಚಾಲ್ತಿ ಖಾತೆಯಿಂದ 5,30,000 ರೂ.ಗಳನ್ನು ರಾಜು ಎಂಬವರು ಎಸ್‌ಬಿಐನಲ್ಲಿ ಹೊಂದಿರುವ ದೀರ್ಘವಧಿ ಸಾಲಕ್ಕೆ ವರ್ಗಾಯಿಸುವಂತೆ ಇ-ಮೇಲ್‌ನಲ್ಲಿ ಕೋರಲಾಗಿದೆ. ಈ ಲೆಟರ್‌ಹೆಡ್‌ನಲ್ಲಿ ಬ್ಯಾಂಕ್‌ನ ಲೆಕ್ಕ ವಿಭಾಗದ ಎಂ.ನವನೀತ್ ಅವರ ನಕಲಿ ಸಹಿ ಬಳಕೆ ಮಾಡಲಾಗಿದೆ.
ಈ ವ್ಯವಹಾರದ ಕುರಿತು ಅಪೆಕ್ಸ್ ಬ್ಯಾಂಕ್ ಅನುಮಾನ ವ್ಯಕ್ತಪಡಿಸಿ ಜು.15 ರಂದು ಎಂಸಿಡಿಸಿಸಿ ಬ್ಯಾಂಕ್‌ನ ಲೆಕ್ಕ ವಿಭಾಗದ ಮುಖ್ಯಸ್ಥರಿಗೆ ಮಾಹಿತಿ ನೀಡಿದರು. ಬಳಿಕ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಂಕರ್ ಬಲೇನಹಳ್ಳಿ ಮಂಡಿ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದಾರೆ.
ಬ್ಯಾಟರಿ ಕಳವು: ಬನ್ನಿಮಂಟಪದ ಬಾಲ ಭವನದಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಬೀಗ ಮುರಿದ ಕಳ್ಳರು 50 ಸಾವಿರ ರೂ. ಮೌಲ್ಯದ 4 ಯುಪಿಎಸ್ ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ. ಎಂದಿನಂತೆ ಜು.15 ರಂದು ಸಂಜೆ 6ಕ್ಕೆ ಕಚೇರಿಗೆ ಬೀಗ ಹಾಕಿ ಸಿಬ್ಬಂದಿ ತೆರಳಿದ್ದರು. ಮರುದಿನ ಬಂದು ನೋಡುವಾಗ ಬೀಗ ಮುರಿದು ಪಿಯುಎಸ್ ಬ್ಯಾಟರಿಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.