ಸಿಂಥೆಟಿಕ್ ಡ್ರಗ್ಸ್ ಸಂಗ್ರಹ ಚಿತ್ರ 
ಮೈಸೂರು

ಸಿಂಥೆಟಿಕ್ಸ್ ಡ್ರಗ್ಸ್ ಅಡ್ಡೆ ಮೇಲೆ ದಾಳಿ

ಶಿವಶಂಕರ್ ಎಂ. ಹೆಬ್ಬಳ್ಳ
ಹುಣಸೂರು: ತಾಲೂಕಿನ ರತ್ನಪುರಿ-ದಾಸನಪುರ ಮಧ್ಯೆ ಇರುವ ತೋಟದ ಮನೆಯಲ್ಲಿ ಅಕ್ರಮವಾಗಿ ಭಾರಿ ಪ್ರಮಾಣದ ಸಿಂಥೆಟಿಕ್ಸ್ ಡ್ರಗ್ಸ್ ಗಳನ್ನು ಪ್ಯಾಕ್ ಮಾಡುತ್ತಿದ್ದ ವೇಳೆಯೇ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಕ್ಕೆ ಪಡೆದಿದ್ದಾರೆ.
ಹುಣಸೂರು ನಗರದ ರಹಮತ್ ಮೊಹಲ್ಲಾದ ಇರ್ಫಾನ್ ಅವರಿಗೆ ಸೇರಿದ ತೋಟದಲ್ಲಿ ಕೃತ್ಯ ನಡೆದಿದ್ದು, ಸುಮಾರು 25 ಕೆ.ಜಿ.ಗೂ ಹೆಚ್ಚು ಸಿಂತೆಟಿಕ್ಸ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ತೋಟದ ಮಾಲೀಕ ಹುಣಸೂರಿನ ಇರ್ಫಾನ್ ಹಾಗೂ ಮೈಸೂರಿನ ಇರ್ಫಾನ್ ಎಂಬ ಇಬ್ಬರು ಸೇರಿಕೊಂಡು ಈ ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದೆ. ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಸಂಜೆ ಪೊಲೀಸರು ದಿಢೀರ್ ದಾಳಿ ನಡೆಸಿದ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದವರನ್ನು ಸುಮಾರು 10 ಕಿ.ಮೀ.ವರೆಗೆ ಬೆನ್ನತ್ತಿ ಹೋಗಿ ನಗರ ಸಮೀಪದ ಸಲೀಂ ಪ್ಯಾಲೇಸ್ ಬಳಿ ಬಂಧಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್‌ಪಿ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೋಟದ ಮಾಲಿಕ ಇರ್ಫಾನ್‌ನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಡ್ಜ್‌ನಲ್ಲಿದ್ದವರು ಪರಾರಿ: ರತ್ನಪುರಿ ಲಾಡ್ಜ್ ಒಂದರಲ್ಲಿ ನಾಲ್ವರು ಕೆಲದಿನಗಳಿಂದ ಹೊರ ರಾಜ್ಯದಿಂದ ಬಂದು ರೂಂ ಮಾಡಿಕೊಂಡಿದ್ದವರು ಪೊಲೀಸರು ತೋಟಕ್ಕೆ ದಾಳಿ ನಡೆಸುತ್ತಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಿಂದೆ ಮೈಸೂರು ನಗರದಲ್ಲೂ ಡ್ರಗ್ಸ್ ಪತ್ತೆಯಾಗಿತ್ತು. ಇದೀಗ ಹಳ್ಳಿಗೂ ವ್ಯಾಪಿಸಿರುವುದು ಆತಂಕಕ್ಕಡೆ ಮಾಡಿದೆ. ಮುಖ್ಯಮಂತ್ರಿಗಳ ತವರುಜಿಲ್ಲೆಯಲ್ಲೇ ಪದೇ ಪದೆ ಡ್ರಗ್ಸ್ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.