ಹುಣಸೂರು ನಗರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪವಿತ್ರಾ ಶ್ರೀಧರ್, ನಂದಿನಿ, ಮೂಕಾಂಬಿಕಾ, ದಾ.ರಾ.ಮಹೇಶ್, ನಾರಾಯಣ ಶೆಟ್ಟಿ ಇತರರಿದ್ದರು. 
ಮೈಸೂರು

ಸ್ವಾವಲಂಬಿ, ಸ್ವಾಭಿಮಾನದ ಬದುಕಿಗೆ ಅಗತ್ಯ ನೆರವು

ನಾಗೇಶ ಎಸ್
ಹುಣಸೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮೀಣರಿಗೆ ಕೇವಲ ಆರ್ಥಿಕ ಸಹಕಾರ ಮಾತ್ರವಲ್ಲದೆ, ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕಿಗೆ ಅವಶ್ಯ ಅರಿವು ಮತ್ತು ನೆರವು ನೀಡುತ್ತಿದೆ ಎಂದು ಯೋಜನೆಯ ಜ್ಞಾನವಿಕಾಸ ಕೇಂದ್ರದ ಜಿಲ್ಲಾ ಯೋಜನಾಧಿಕಾರಿ ಮೂಕಾಂಬಿಕಾ ತಿಳಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಯೋಜನೆಯ ಜ್ಞಾನವಿಕಾಸ ಕೇಂದ್ರದ ವತಿಯಿಂದ ಆಯೋಜಿಸಿದ್ದ ಮಹಿಳಾ ವಿಚಾರಗೋಷ್ಟಿಯಲ್ಲಿ ಮಾತನಾಡಿದರು. ಧರ್ಮಸ್ಥಳ ಯೋಜನೆ ಎಂದರೆ ಕೇವಲ ಹಣಕಾಸಿನ ವ್ಯವಹಾರ ಎನ್ನುವ ಭಾವನೆ ಕೆಲವರಲ್ಲಿದೆ. ವ್ಯಕ್ತಿಯ, ಕುಟುಂಬದ ಸರ್ವತೋಮುಖ ಅಭಿವೃದ್ಧಿ ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ಹೆಗ್ಗಡೆ ಅವರ ಕನಸಾಗಿದೆ. ಆರ್ಥಿಕ, ಶೈಕ್ಷಣಿಕ, ಆರೋಗ್ಯವಾಗಿ ಕುಟುಂಬ ಸ್ವಾವಲಂಬಿತನದಿಂದ ಬದುಕಬೇಕೆಂದು ಅದಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಜ್ಞಾನ ವಿಕಾಸ ಕೇಂದ್ರದ ಮೂಲಕ ಪ್ರತಿ ತಾಲೂಕಿನಲ್ಲಿ 25 ಕೇಂದ್ರಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಕುಟುಂಬ ನಿರ್ವಹಣೆ, ಹಣಕಾಸು ನಿರ್ವಹಣೆ, ಆರೋಗ್ಯ, ಅಕ್ಷರ ಮುಂತಾದ ವಿಷಯಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಮೂಡಿಸಲಾಗುತ್ತಿದೆ. ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ನಿರೂಪಿಸಲಾಗುತ್ತಿದೆ ಎಂದರು.
ಯೋಜನೆ ವತಿಯಿಂದ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಗೆಳತಿ ಯೋಜನೆಯಡಿ ಸಮಸ್ಯೆ ಪರಿಹರಿಸುವ, ಅಸಹಾಯಕ ವೃದ್ಧರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಯೋಜನೆಯಡಿ ಮನೆ ನಿರ್ಮಾಣ, ವಾತ್ಸಲ್ಯ ಫುಡ್‌ಕಿಟ್ ವಿತರಣೆ, ಅನಾಥ ವೃದ್ಧರಿಗೆ ಮಾಸಾಶನ ನೀಡುವುದು, ವಿದ್ಯಾರ್ಥಿವೇತನ ಸೇರಿದಂತೆ ಸಮಾಜದ ಪ್ರತಿಸ್ತರದಲ್ಲೂ ಯೋಜನೆಯ ಕಾರ್ಯಕರ್ತರು ನಿಮ್ಮ ಮನೆಯ ಸಹೋದರ, ಸಹೋದರಿಯರಾಗಿ ನೆರವು ನೀಡುತ್ತಿದ್ದಾರೆ. ಯೋಜನೆ ಸಂಪೂರ್ಣ ಸದ್ಬಳಕೆ ನಿಮ್ಮಿಂದಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕ್ಯಾನ್ಸರ್ ರೋಗದ ಕುರಿತು ಮಂಡ್ಯದ ಸ್ಪಂದನ ಆಸ್ಪತ್ರೆಯ ಡಾ.ಕಾವ್ಯಾ ಮಾಹಿತಿ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ವಕೀಲೆ ಪವಿತ್ರಾ ಶ್ರೀಧರ್ ಅಧ್ಯಕ್ಷತೆವಹಿಸಿ ಮಾತನಾಡಿದರು. ಜನಜಾಗೃತಿ ವೇದಿಕೆ ಸದಸ್ಯ ದಾ.ರಾ.ಮಹೇಶ್, ನಂದಿನಿ, ಯೋಜನಾಧಿಕಾರಿ ನಾರಾಯಣ ಶೆಟ್ಟಿ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ರೂಪಾ, ಯೋಜನೆಯ ಮೇಲ್ವಿಚಾರಕರು, ವಿವಿಧ ಸಂಘಗಳ ಸದಸ್ಯರು ಹಾಜರಿದ್ದರು. ಜ್ಞಾನವಿಕಾಸ ಸದಸ್ಯರ ಕೌಶಲವನ್ನು ಗುರುತಿಸುವ ವಿವಿಧ ಸ್ವ ಉದ್ಯೋಗ ಮಳಿಗೆಗಳ ಪ್ರದರ್ಶನ, ಸಾಂಸ್ಕೃತಿಕ ಚಟುವಟಿಕೆ, ಪುಷ್ಪಗುಚ್ಛ ಸ್ಪರ್ಧೆ, ರಂಗೋಲಿ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.